ಅದು ಕಾಂಕ್ರೀಟ್ ಕಾಡಿನ ಮಧ್ಯದಲ್ಲಿರುವ ಕೃತಕ ಕಾಡು. ಅರ್ಥಾತ್ ಅದೊಂದು ಪಾರ್ಕು. ಹೆಸರಿಗೆ ಪ್ರಕೃತಿಯ ಪ್ರತಿರೂಪವೆಂಬ ಹೆಗ್ಗಳಿಕೆ; ಒಳಗೆಲ್ಲಾ ಕೃತಕತೆಯ ಹೊದಿಕೆ! ಅಲ್ಲಿನ ಯಾವ ಮರ ಗಿಡಗಳಿಗೂ ತಮ್ಮಿಚ್ಚೆಯಂತೆ ಕುಡಿಯೊಡೆದು ಹಬ್ಬುವ ಭಾಗ್ಯವಿಲ್ಲ. ಮಾಲಿಯ ಮನದಿಚ್ಚೆಯಂತೆ ಅವುಗಳ ಕೊನರು.
ಚುಮುಚುಮು ಇಬ್ಬನಿಯಲ್ಲಿ ತೋಯ್ದ ಪಾರ್ಕಿನ ಹುಲ್ಲುಹಾಸು ರವಿರಶ್ಮಿಗೆ ಮೈಯೊಡ್ಡಿ ಪುಳಕಗೊಳ್ಳಬೇಕೆನ್ನುವಷ್ಟರಲ್ಲೇ ಉಂಡು ಉಂಡೂ ಗುಂಡಗಾದ ಗುಂಡೋದರ ಲೆಫ್ಟ್ ರೈಟ್ ಮಾಡುವ ಕಾಲುಗಳಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುತ್ತದೆ. ಗಂಟೆ ಹತ್ತಾಗುತ್ತಿದ್ದಂತೆ ಪಾರ್ಕಿಗೆ ಪ್ರೇಮಿಗಳ ಆಗಮನವಾಗುತ್ತದೆ. ಪಾರ್ಕಿನ ತರುಲತೆಗಳೆಲ್ಲ ಜೋಡಿಹಕ್ಕಿಗಳ ಪಿಸುಮಾತಿಗೆ ಸಾಕ್ಷಿಯಾಗುತ್ತವೆ. ಪ್ರೇಮ ಸಾಮ್ರಾಜ್ಯ ಕಟ್ಟುವ ಕಾತುರದಲ್ಲಿರುವ ಅವರಿಗೆ ಅಲ್ಲಿ ಹೂ ಬಿಟ್ಟು ನಳನಳಿಸುವ ಗಿಡಗಳ ಮೈದಡವಲೂ ಸಮಯವಿರುವುದಿಲ್ಲ!ನಾಲ್ಕು ಗಂಟೆ ಸಮೀಪಿಸುತ್ತಿದ್ದಂತೆ ವೃದ್ಧರು, ಗೃಹಿಣಿಯರು ತಮ್ಮ ದಿನದ 'ಧುಮುಧುಮು' ಪರಿಹರಿಸಿಕೊಳ್ಳುವ ದೃಷ್ಯ ಸರ್ವೆ ಸಾಮಾನ್ಯ. ಅವರುಗಳ ದುಃಖ ದುಮ್ಮಾನಗಳಿಗೆ ಅಲ್ಲಿರುವ ಮರಗಿಡಗಳು ಕಿವಿಯಾಗುತ್ತವೆ. ಸಂಜೆ ಏಳಾಗುತ್ತಿದ್ದಂತೆ ಜನ ಸಂದಣಿ ಕ್ರಮೇಣ ಕರಗಿ
ಪಾರ್ಕಿನಲ್ಲಿ ನೀರವ ಮೌನ ಆವರಿಸಿಕೊಳ್ಳುತ್ತದೆ. ಹಾಗೆಂದು ಈಗ ಪಾರ್ಕು ಬಿಡುವಾಯಿತೆಂದುಕೊಳ್ಳಬೇಡಿ! ದೂರದೂರಿಂದ ಹೊರಟು ಸೇರಬೇಕಾದ ಸ್ಠಳ ಸೇರಲಾಗದವರಿಗೆ; ದಿನವಿಡೀ ಅಲೆದು ದಣಿದ ಭಿಕ್ಷುಕರಿಗೆ ಆ ರಾತ್ರಿಯ ಸುಪ್ಪತ್ತಿಗೆಯಾಗುತ್ತದೆ ಪಾರ್ಕು.
ಇಷ್ಟಾದರೂ ಪಾರ್ಕಿನ ಗಿಡ ಮರಗಳ ದನಿಗೆ ಕಿವಿಯಾಗುವ ವ್ಯವಧಾನ ಪಾರ್ಕಿನ ಮಾಲಿಯಿಂದ ಹಿಡಿದು ನಿತ್ಯ ಬರುವ ವಯೋ ವೃಧ್ದರವರೆಗೆ ಯಾರೋಬ್ಬರಿಗೂ ಇಲ್ಲ! ಹಾಗಾಗಿ ಅಲ್ಲಿನ ಗಿಡಮರಗಳೆಲ್ಲ ಸದಾ ಎಲೆಯುದುರುವ ಕಾಲದ ಪ್ರತೀಕ್ಷೆಯಲ್ಲಿರುತ್ತವೆ - ಬೇಡವಾದ ಗರ್ಭ ಹೊತ್ತ ದಿನ ತುಂಬದ ಬಸುರಿಯೊಬ್ಬಳು ಪ್ರಸವಕ್ಕೆ ನಿರೀಕ್ಷಿಸುವಂತೆ...!
ಶುಕ್ರವಾರ, ಅಕ್ಟೋಬರ್ 31, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
8 ಕಾಮೆಂಟ್ಗಳು:
ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಾನು ಮೊದಲು ಕಾಲೇಜಿನ ದಿನಗಳಲ್ಲಿ ಓದಲಿಕ್ಕೆ ಪಾರ್ಕಿಗೆ ಹೋಗುತ್ತಿದ್ದೆ. ಈಗ ಅಂತಹ ವಾತಾವರಣವಿಲ್ಲ.
ನಿಜ.. ಪಾರ್ಕುಗಳಲ್ಲಿ ಜನ ತಮ್ಮ ಸಂತೋಷಕ್ಕಷ್ಟೇ ಹೋಗುತ್ತಾರೆ.
@ ಶಿವು, ಹರಿಶ್.
ಬ್ಲಾಗಿಗೆ ಬೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ.
-ರಾಘವೇಂದ್ರ ಕೆಸವಿನಮನೆ.
ಪಾರ್ಕಿನ ವ್ಯಥೆ, ದುಮ್ಮಾನ ಚೆನ್ನಾಗಿ ವಿವರಿಸಿದ್ದೀರಿ. ಅದು ನಿಜ ಕೂಡ. ಧನ್ಯವಾದಗಳು.
ನಿಮ್ಮ ಬ್ಲಾಗ್ ಅನ್ನು ಕನ್ನಡಪ್ರಭ ವೆಬ್ ಆವೃತ್ತಿಯಲ್ಲಿ ನೋಡಿ ಸೀದಾ ಬಂದುಬಿಟ್ಟೆ..ಅಭಿನಂದನೆಗಳು. ಚೆನ್ನಾಗಿ ಬರೀತೀರ..ಬೆಂಗಳೂರಿಗೆ ಬರುವ ಮೊದಲು ..ಇಲ್ಲೆಲ್ಲ ಪಾರ್ಕುಗಳಿರುತ್ತವೆ..ಒಳ್ಳೆಯ ವಾತಾವರಣ ಇದೆ..ಕುಳಿತು ಆರಾಮವಾಗಿ ಓದಬಹುದು..ಕುಳಿತು ಬರೆಯಬಹುದು ಅಂದುಕೊಂಡಿದ್ದೆ..ಆದರೆ ಒಂದೇ ಸಲ ಕೆಲ್ಸ ಮುಗಿಸಿ ಸಂಜೆ ಬಸವನಗುಡಿಯ ಕೃಷ್ಣ....(ಹೆಸರು ಮರೆತೆ) ಪಾರ್ಕಿಗೆ ಪುಸ್ತಕ ಹಿಡಿದುಕೊಂಡು ಹೋದರೆ...!ಮತ್ತೆಂದೂ ಪಾರ್ಕುಗೆ ಹೋಗಲೇ ಇಲ್ಲ. ವರ್ಷಕ್ಕೊಮ್ಮೆ ಲಾಲ್ ಬಾಗ್ ಪುಷ್ಪಪ್ರದರ್ಶನಕ್ಕೆ ಹೋಗ್ತೀನಿ..
ಚೆನ್ನಾಗಿ ಬರೇತೀರಿ ಸರ್..
-ಚಿತ್ರಾ
ನಿಜ ಪಾರ್ಕುಗಳಲ್ಲಿ ಮರಗಳಿಗೆ ಸ್ವತಂತ್ರವಾಗಿ ಹಬ್ಬಲು ಅವಕಾಶಗಳಿರುವುದಿಲ್ಲ.. ನಿಮ್ಮ ಲೇಖನದಿಂದ ನಿಮಗಿರುವ ಪ್ರಕೃತಿಯ ಬಗೆಗಿನ ಕಾಳಜಿ ವ್ಯಕ್ತವಾಗಿದೆ, ಧನ್ಯವಾದಗಳು, ಹೀಗೆ ಒಳ್ಳೊಳ್ಳೆ ಲೇಖನಗಳನ್ನು ಬರೆಯುತ್ತಿರಿ
@ ಚಿತ್ರಾ , ಮನಸ್ವಿ,
ಬ್ಲಾಗಿಗೆ ಭೇಟಿನೀಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.
ರಾಘವೇಂದ್ರ ಕೆಸವಿನಮನೆ.
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ಕಾಮೆಂಟ್ ಪೋಸ್ಟ್ ಮಾಡಿ