ಶನಿವಾರ, ಅಕ್ಟೋಬರ್ 4, 2008

ಹಿಂದಿನ ಬೆಂಚಿನ ಹುಡುಗರು ನಾವು.....

ದೇಕೋ ಗೊತ್ತಿಲ್ಲ,ಶಾಲಾ ಕಾಲೇಜು ದಿನಗಳಲ್ಲಿ ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದುದನ್ನು ನೆನಪಿಸಿಕೊಂಡು ಪುಳಕಿತರಾಗುವುದರಲ್ಲೂ ಒಂಥರಾ ಸೊಗಸಿದೆ ! ಕಾಲೇಜು ದಿನಗಳಲ್ಲಿ ಕೊನೆ ಬೆಂಚಿನಲ್ಲಿ ಕುಳಿತುಕೊಂಡು ಮಾಡುತ್ತಿದ್ದ ಕೀಟಲೆ, ತಥಾಕಥಿತ ಉಪನ್ಯಾಸಕರಿಗೆ ನೀಡುತ್ತಿದ್ದ ಕೋಟಲೆಗಳನ್ನು ನೆನಸಿಕೊಂಡರೆ ಮನಸಿಗೆ ಈಗಲೂ ರೋಮಾಂಚನದ ವರ್ಷಧಾರೆ.

ಹೈಸ್ಕೂಲು ಸೇರಿದಾಗಲೇ ಹಿಂದಿನ ಬೆಂಚಿನಲ್ಲಿ ಆಸೀನನಾಗಬೇಕೆಂಬ ಮಹದಾಸೆ ನನಗಿತ್ತಾದರೂ; ಪಿಟಿ ಮಾಸ್ಟರ್ ಮುಂದಾಳತ್ವದಲ್ಲಿ ಹೈಟು ಪ್ರಕಾರ ಸೀಟು ಹಂಚಿಕೆಯಾಗುತ್ತಿತ್ತಾದ್ದರಿಂದ ಅದು ಸಾಧ್ಯವಾಗಲ್ಲಿಲ್ಲ. ಮೂರು ವರ್ಷ ಮುಂದಿನ ಬೆಂಚಿನಲ್ಲಿ ಕುಳಿತೇ ಕಳೆಯಬೇಕಾಯಿತು. ಆದರೂ ಅವಕಾಶ ಸಿಕ್ಕಾಗಲೆಲ್ಲ ಹಿಂದಿನ ಬೆಂಚಿನಲ್ಲಿ ಕುಳಿತು ಇಡೀ ತರಗತಿಯನ್ನು 'ಅವಲೋಕಿಸುವ' ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಪಿಯುಸಿಗೆ ಬಂದಮೇಲೆ ಕ್ಲಾಸುರೂಮೆಂಬುದು ನಮ್ಮ ಸ್ವಂತ ಸಾಮ್ರಾಜ್ಯವೆಂಬಂತಾಗಿಹೋಗಿತ್ತು. ನಮ್ಮ ಸೆಕ್ಷನ್ನಿನಲ್ಲಿ ಇದ್ದಿದ್ದು ಬರೋಬ್ಬರಿ ೧೨೦ ಜನ ! ನಾನು ಸ್ವಲ್ಪ ಕಡಿಮೆ ಎತ್ತರದವನಾದ್ದರಿಂದ ಲಾಸ್ಟ್ ಬೆಂಚಿನಲ್ಲಿ ಕುಳಿತರೆ ಲೆಕ್ಚರರುಗಳಿಗೆ ಕಾಣಿಸುತ್ತಲೇ ಇರಲಿಲ್ಲ. ಹೊಸ ಉಪನ್ಯಾಸಕರ ಆಗಮನವಾಯಿತೆಂದರೆ ನಮ್ಮ ರಾಕೆಟ್ ಧಾಳಿ ಆರಂಭವಾಗಿಬಿಡುತ್ತಿತ್ತು. ಹೈಸ್ಕೂಲಿನಲ್ಲಿ ಬರೆದು ಮುಗಿಸಿದ ನೋಟ್ ಪುಸ್ತಕದ ಹಾಳೆಗಳೆಲ್ಲ ರಾಕೆಟ್ ಆಗಿ ಮರುಬಳಕೆಯಾಗುತ್ತಿದ್ದವು. ಇನ್ನು ಕೆಲ ಲೆಕ್ಚರರ್ ಗಳ ಮೇಲೆ ಪ್ರಶ್ನೆಗಳ ಸುರಿಮಳೆ. ನಮ್ಮ ಈ ಉಪಟಳಗಳನ್ನು ಸಹಿಸಲಾಗದೆ ಕೆಲವರು ಬೇರೆ ಸೆಕ್ಷನ್ನಿಗೆ ಬದಲಾಯಿಸಿಕೊಂಡಿದ್ದುಂಟು. ಈ ಕೀ (ಕೋ)ಟಲೆಗಳೆಲ್ಲ ಬೋರಾದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನಿದ್ರಾದೇವಿಗೆ ಶರಣಾಗಿಬಿಡುತ್ತಿದ್ದೆವು.

ಡಿಗ್ರಿಯಲ್ಲಿ ಹಿಂದಿನ ಬೆಂಚು ಸಿಗಲಿಲ್ಲವಾದರೂ ಅಲ್ಲಿದ್ದು ಮಾಡುವ ಕೆಲಸವನ್ನು ಮುಂದಿನ ಬೆಂಚಿನಲ್ಲಿದ್ದುಕೊಂಡೇ ಮಾಡುತ್ತಿದ್ದೆವು.! ಆದರೆ ಅದರಲ್ಲಿ ಹೆಚ್ಚಿನ ಸಮಯವನ್ನು ನಿದ್ರಾದೇವಿ ನುಂಗಿಬಿಡುತ್ತಿದ್ದಳು. ನಾನಂತೂ ಉಡುಪಿ ಮಠದಲ್ಲಿ ಗಡದ್ದಾಗಿ ಪೋಣಿಸಿ ಕ್ಲಾಸಿಗೆ ಹೋಗುತ್ತಿದ್ದೆನಾದ್ದರಿಂದ ಮಧ್ಯಾಹ್ನದ ಅವಧಿಯೆಂದರೆ ನಿದ್ರಾದೇವಿಯ ಉಪಾಸನೆಯೇ ಆಗಿತ್ತು. ಆದರೂ ಒಮ್ಮೆಯೂ ಲೆಕ್ಚರರುಗಳ ಕೈಯಲ್ಲಿ ಸಿಕ್ಕಿಬಿದ್ದುದಿಲ್ಲ. ಇದು ನಮ್ಮ ಕ್ಲಾಸಿನ ಹುಡುಗಿಯರಿಗೂ ಉತ್ತರ ಸಿಗದ ಒಗಟಾಗಿತ್ತು. ಹೀಗೆಂದು ಹುಡುಗಿಯೊಬ್ಬಳು ಕೊನೆ ವರ್ಷ ಆಟೋಗ್ರಾಫ್ ನಲ್ಲಿ ಬರೆದೂ ಬಿಟ್ಟಿದ್ದಳು.!ವಾಸ್ತವವೆಂದರೆ, ನನ್ನ ಸ್ಕೋರ್ ಗ್ರಾಫ್ ಯಾವಾಗಲೂ ಎಪ್ಪತ್ತೈದರ ಮೇಲಿರುತ್ತಿದ್ದುದರಿಂದ ಹಾಗೂ ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ 'ಕೈವಾಡ' ವಿರುತ್ತಿದ್ದರಿಂದ ಇದಕ್ಕೆಲ್ಲ ನನಗೆ ಕೊಂಚ ವಿನಾಯ್ತಿಯಿತ್ತು.
ಡಿಗ್ರಿ ಮುಗಿಸಿ ವರ್ಷಗಳೇ ಕಳೆದಿದ್ದರೂ ಈಗಲೂ ಕಾಲೇಜಿಗೆ ಹೋಗುವವರನ್ನು ಕಂಡಾಗ ಹಿಂದಿನ ಬೆಂಚಿನ ನೆನಪು ಮರುಕಳಿಸಿ ಮುದ ನೀಡುತ್ತದೆ.

4 ಕಾಮೆಂಟ್‌ಗಳು:

shivu.k ಹೇಳಿದರು...

ಚಿಕ್ಕ ಚೊಕ್ಕ ಬರವಣಿಗೆ ಇತರ ಚಟುವಟಿಕೆಗಳಲ್ಲಿ ಕೈವಾಡವಿದ್ದಂತೆ ಈ ಬರವಣಿಗೆಯಲ್ಲೂ ಕೈವಾಡವಿದೆಯೆ[ತಮಾಷೆಗೆ].

ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆಸಿದ್ದಕ್ಕೆ ಧನ್ಯವಾದಗಳು. ನನ್ನ ಇತರ ಲೇಖನಗಳನ್ನು ಓದಿ ಇಷ್ಟವಾದರೆ ಪ್ರತಿಕ್ರಿಯಿಸಿ.

ಮತ್ತು ನೀವು ಹೇಳಿದಂತೆ 'ಮೀನುಗಾರನ ಬಲೆ ಚಿತ್ರಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳೂ ತುಂಬಾ ಬಂದಿವೆ.
ಇನ್ನೂ ಬರುತ್ತಿವೆ. ಇದನ್ನು ಗುರುತಿಸಿದಕ್ಕೆ ಧನ್ಯವಾದಗಳು.
ಶಿವು.ಕೆ.

Ittigecement ಹೇಳಿದರು...

IDELLA NANNA ANUBHAVAGALU SAHA..!
AA DINAGALA MAZA..NE BERE ITTU ALLAVA?
CHENNAGIDE WRITTINGU...

ರಾಘವೇಂದ್ರ ಕೆಸವಿನಮನೆ. ಹೇಳಿದರು...

@ ಸಿಮೆಂಟು ಮರಳಿನ ಮಧ್ಯೆ
Thanx for your comment!!!!
haudu hegadere!koti kodtini andru aa khusi matte sigolla! bari savi nenapu matra!
Rahu kesavinamane.

Harisha - ಹರೀಶ ಹೇಳಿದರು...

ನನಗೆ ಕಡೆಯ ಬೆಂಚ್ ಅಂದ್ರೆ ಅಲರ್ಜಿ.. ಆದ್ರೆ ನೀವು ಹೇಳಿದಂತೆ ಮೊದಲಿನ ಬೆಂಚಿನಲ್ಲಿ ಕುಳಿತೇ ಸಾಕಷ್ಟು ಕಿತಾಪತಿ ಮಾಡಿದ್ದೇನೆ :-)