ಬುಧವಾರ, ಮಾರ್ಚ್ 25, 2009

ಸುಶಿಕ್ಷಿತನ ಸಣ್ಣತನ

ತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ನಡೆದ ಘಟನೆ. ಸಿಟಿ ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಸಮೀಪವೇ ಇದ್ದ ಸಣ್ಣ ಮೈದಾನದಲ್ಲಿ ಮಕ್ಕಳ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಒಬ್ಬಾತ ಜೋರಾಗಿ ಹೊಡೆದಾಗ ಬಾಲು ಮೈದಾನವನ್ನು ದಾಟಿ ನನ್ನ ಪಕ್ಕ ನಿಂತಿದ್ದ ಯುವಕನ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಮಕ್ಕಳು ಬಾಲ್ ಪಡೆಯಲು ಓಡೋಡಿ ಬಂದವು.

ಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು.

ದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ.

ಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು.

ವಿದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು?

ಗುರುವಾರ, ಮಾರ್ಚ್ 12, 2009

ಕಥೆಯಲ್ಲದ ಕಥೆ

ಶ್ವಾನ ಸಂರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ಎಂದಿನಂತೆ ತನ್ನ ಫೀಲ್ಡ್ ವರ್ಕ್ ಮುಗಿಸಿ ಸಂಘದ ಕಚೇರಿಗೆ ವಾಪಸಾಗುತ್ತಿದ್ದ. ಸಂಘಕ್ಕೆ ಅಧ್ಯಕ್ಷನಾದಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸದಲ್ಲೇ ಭಾರೀ ಯಶಸ್ಸು ಸಿಕ್ಕಿದ್ದ ಕಳೆ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೀದಿ ನಾಯಿಗಳನ್ನು ಉಳಿಸಲು ತಾನು ಕೈಗೆತ್ತಿಕೊಂಡ ಚಳುವಳಿ ತಾರಕಕ್ಕೇರಿದ್ದು ಆತನಿಗೆ ವಿಪರೀತ ಸಂತಸ ತಂದಿತ್ತು. ನಗರದಲ್ಲಿ ಬೀದಿ ನಾಯಿಗಳ ಪರವಾಗಿ ಪೋಸ್ಟರ್ , ಕರಪತ್ರಗಳು ಯಥೇಚ್ಚವಾಗಿ ರಾರಾಜಿಸುತ್ತಿದ್ದವು.

ನಾಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು.

ವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ.

ದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು.

ನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು.
ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು.

ನಾಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.!
ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು.