ಬುಧವಾರ, ಸೆಪ್ಟೆಂಬರ್ 17, 2008

ಜ್ವಾಪಾನ ರಾತ್ರಿಯಾತು..

ನಾನು ರಾತ್ರಿ...... ಹಗಲಿಡೀ ದುಡಿದು ದಣಿದವರ ಪಾಲಿಗೆ ಶಾಂತಿ,ವಿಶ್ರಾಂತಿ ನೀಡುವ ಸಮಯವಾದರೆ,ದುಡಿಮೆ ಹುಡುಕಿ ದಣಿದವರು,ದುಡಿಯ ಹೊರಟು ಸೋತವರು ಹಗಲಿಡೀ ಧರಿಸಿದ ಮುಖವಾಡ ಕಳಚಿಟ್ಟು ನಿರುಮ್ಮಳವಾಗುವ ಅಮೃತಘಳಿಗೆ. "ಬೆಳಕಿಗೆ" ಬಾರದವರು ತುತ್ತಿನ ಚೀಲ ತುಂಬಿಸಿಕೊಳ್ಳುವ ಪರ್ವಕಾಲ. ಬೆಳಕು ನೀಡುತ್ತೇವೆಂದು ಬೀಗುವವರ ಕತ್ತಲೆಯ ವ್ಯವಹಾರ ನಡೆಯುವ ಸಂಧಿ ಸಮಯ. ಅಸಂಖ್ಯಾತ ನೋವು, ನಿಟ್ಟುಸಿರು, ನಿರಾಸೆಗಳನ್ನು ನನ್ನ ಗೂಢ ಗರ್ಭದೊಳಕ್ಕೆ ಸೆಳೆದು ಸಾಯಿಸುವ ದುಶ್ಟ ಸಮಯ.

ನಾನು ರಾತ್ರಿ..... ಬೆಳಕು ಬೆನ್ನಿಗೇ ಇದ್ದರೂ ಎಂದೆಂದೂ ಸಂಧಿಸಲಾಗದ ದುರ್ದೈವಿ. ಬಾನಲ್ಲಿ ಬೆಳ್ಳಿ ಕಿರಣ ಕಾಣುತ್ತಿದ್ದಂತೆ ಓಡಿ ಮರೆಯಾಗುವ ಮುಖೇಡಿ. ನೀವು ಹಚ್ಚುವ ದೀಪಕ್ಕೆ ಅರೆನಗ್ನಗೊಳ್ಳುವ ಲಜ್ಜೆಗೇಡಿ.ಸೂರ್ಯ ಮುಳುಗಿದ ಕೂಡಲೇ ಕಳ್ಳಹೆಜ್ಜೆ ಇಟ್ಟು ಬರುವ ಕರಾಳ ವದನ.

ನಿಜವಾಗಿಯೂ ಪಾಪಿ (ರಾತ್ರಿ) ಚಿರಾಯು. ಪ್ರಪಂಚದಲ್ಲಿ ಬೆಳಕಿರುವವರೆಗೂ ನನಗೂ ಪೂರ್ಣ ಆಯಸ್ಸು. ಆದರೂ ಬೆಳಕಿಗಿಂತ ನಾನೇ ಎಲ್ಲರಿಗೂ ಇಶ್ಟ. ಇದಕ್ಕೆ ಶಿಶ್ಟರು - ದುಶ್ಟರೆಂಬ ಭೇದವಿಲ್ಲ. ಶಿಶ್ಟರು ಉಂಡಿದ್ದನ್ನು ಅರಗಿಸಿಕೊಳ್ಳುವ ಕಾಲವಾದರೆ ದುಶ್ಟರು ಕರಗಿಸಿದ್ದನ್ನು ಮತ್ತೆ ಗಳಿಸುವ ಕಾಲ. ಒಟ್ಟಿನಲ್ಲಿ ರೂಪ ಕರಾಳವಾದರೂ ಎಲ್ಲರ ಪ್ರೀತಿ ನನಗೆ ಹೇ(ಧಾ)ರಾಳ.

ಕೆಲವರಿಗೆ ನಾನೆಂದರೆ ಎಲ್ಲಿಲ್ಲದ ಭಯ.ಇನ್ನು ಕೆಲವರಿಗೆ ( ಅವರ ಭಯ ಪಕ್ಕದವರಿಗೆ ಕಾಣಿಸದಂತೆ ಕಾಯುತ್ತೇನಲ್ಲ ಹಾಗಾಗಿ) ಧೈರ್ಯ. ಆದರೂ ನಾನು ಬರುವ ಸಮಯವಾಗುತ್ತಿದ್ದಂತೆ ಎಂಥ ಧೈರ್ಯಸ್ಥನೂ ತನಗೆ ತಾನೇ ಎಚ್ಚರಿಸಿಕೊಳ್ಳುತ್ತಾನೆ; ಜ್ವಾಪಾನ ರಾತ್ರಿಯಾತು..

ಟಿಪ್ಪಣಿ: ೧೯-೧೨-೨೦೦೭ರ "ವಿಜಯ ಕರ್ನಾಟಕ" ಮೈಸೂರು ಆವ್ರುತ್ತಿಯ "ರೂಪಕ" ಪುರವಣಿಯಲ್ಲಿ ಪ್ರಕಟವಾದ ಲೇಖನ.


ಮಂಗಳವಾರ, ಸೆಪ್ಟೆಂಬರ್ 16, 2008

ಬ್ಲಾಗಿನೊಳು ಬಂದಿಹೆನು ಕೈ ಮುಗಿದು ನಿಂದಿಹೆನು

ಪ್ರಿಯ ಓದುಗರೇ ಮತ್ತು ಬ್ಲಾಗಿಗರೇ,


ಈವರೆಗೆ ವಿವಿಧ ನಲ್ದಾಣಗಳನ್ನು ಹೊಕ್ಕು ಬರಹಗಳ ಸವಿಯನ್ನು ಸವಿಯುತ್ತಿದ್ದ ನಾನು ಇಂದು ಈ ಬ್ಲಾಗೆಂಬ ಮಹಾಮನೆಗೆ ಹೊಸ ಸದಸ್ಯನಾಗಿ ಸೇರ್ಪಡೆಗೊಂಡಿದ್ದೇನೆ.
ಮನಸ್ಸೆಂಬ ಮಹಾ ಸಾಗರದಲ್ಲೇಳುವ ಉನ್ಮತ್ತ ಅಲೆಗಳನ್ನು ತಣಿಸಿ ಮಣಿಸಲು ನಾನು ಕಂಡುಕೊಂಡಿರುವ ಮಾರ್ಗ ಬರವಣಿಗೆ. ಹಾಗೆಂದು ನಾನು ಭಯಂಕರ ಬರಹಗಾರನೇನಲ್ಲ! ಎಲ್ಲೋ ಆಗೀಗ ತೋಚಿದ್ದನ್ನೇ ಗೀಚುವ ಹವ್ಯಾಸವಿದೆ. ಕೆಲ ಸಮಯ ಮಾಸಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ್ದರಿಂದ ನನ್ನ ಓತಪ್ರೋತವಾದ ಬರವಣಿಗೆಗೆ ಒಂದು ಚೌಕಟ್ಟು ಸಿಕ್ಕಿದೆ.
‘ನಡೆವವರೆಡವದೆ ಕುಳಿತವರೆಡಹುವರೆ?’ ಎಂಬ ಮಾತಿನಲ್ಲಿ ನಂಬಿಕೆ ನನಗೆ. ಕುಳಿತು ಕೊಳೆಯುವುದಕ್ಕಿಂತ ಎಡವಿದರೂ ಎದ್ದು ನಡೆಯುತ್ತಿದ್ದರೆ ಇಂದಲ್ಲ ನಾಳೆ ಯಾವುದೋ ಗಮ್ಯವನ್ನಂತೂ ತಲುಪುತ್ತೇವೆ ಅಲ್ವಾ? ಹಾಗೆಂದುಕೊಂಡೇ “ಇಂಚರ”ದ ಮೂಲಕ ಹೊಸ ನಡಿಗೆಯೊಂದನ್ನು ಪ್ರಾರಂಭಿಸಿದ್ದೇನೆ. ಇಂಚರದ ಶ್ರುತಿ ಲಯ ತಾಳಗಳಲ್ಲಿ ವ್ಯತ್ಯಾಸವಾದರೆ ಸರಿಪಡಿಸಲು ಹಿರಿಯರೂ ಘಟಾನುಘಟಿಗಳೂ ಆದ ನೀವೆಲ್ಲಾ ಇದ್ದೀರಿ! ‘ಇವನಾರವ, ಇವನೆಷ್ಟರವ’ ಎಂದೆಣಿಸದೆ ‘ಇವ ನಮ್ಮವ, ಇವ ನಮ್ಮವ ಎಂದೆಣಿಸಿ ಸಲಹೆ, ಸಹಕಾರ ನೀಡಬೇಕೆಂದು ಕೇಳುತ್ತಾ ಭಾವ ನಾವೆಯಲಿ ದೂರ ತೀರದ ಯಾನವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆ ಇರಲಿ.

ನಿಮ್ಮವ,
ರಾಘವೇಂದ್ರ ಕೆಸವಿನಮನೆ.