ಶುಕ್ರವಾರ, ಅಕ್ಟೋಬರ್ 31, 2008

ಹೀಗೊಂದು ಪಾರ್ಕು ಪುರಾಣವು

ದು ಕಾಂಕ್ರೀಟ್ ಕಾಡಿನ ಮಧ್ಯದಲ್ಲಿರುವ ಕೃತಕ ಕಾಡು. ಅರ್ಥಾತ್ ಅದೊಂದು ಪಾರ್ಕು. ಹೆಸರಿಗೆ ಪ್ರಕೃತಿಯ ಪ್ರತಿರೂಪವೆಂಬ ಹೆಗ್ಗಳಿಕೆ; ಒಳಗೆಲ್ಲಾ ಕೃತಕತೆಯ ಹೊದಿಕೆ! ಅಲ್ಲಿನ ಯಾವ ಮರ ಗಿಡಗಳಿಗೂ ತಮ್ಮಿಚ್ಚೆಯಂತೆ ಕುಡಿಯೊಡೆದು ಹಬ್ಬುವ ಭಾಗ್ಯವಿಲ್ಲ. ಮಾಲಿಯ ಮನದಿಚ್ಚೆಯಂತೆ ಅವುಗಳ ಕೊನರು.

ಚುಮುಚುಮು ಇಬ್ಬನಿಯಲ್ಲಿ ತೋಯ್ದ ಪಾರ್ಕಿನ ಹುಲ್ಲುಹಾಸು ರವಿರಶ್ಮಿಗೆ ಮೈಯೊಡ್ಡಿ ಪುಳಕಗೊಳ್ಳಬೇಕೆನ್ನುವಷ್ಟರಲ್ಲೇ ಉಂಡು ಉಂಡೂ ಗುಂಡಗಾದ ಗುಂಡೋದರ ಲೆಫ್ಟ್ ರೈಟ್ ಮಾಡುವ ಕಾಲುಗಳಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುತ್ತದೆ. ಗಂಟೆ ಹತ್ತಾಗುತ್ತಿದ್ದಂತೆ ಪಾರ್ಕಿಗೆ ಪ್ರೇಮಿಗಳ ಆಗಮನವಾಗುತ್ತದೆ. ಪಾರ್ಕಿನ ತರುಲತೆಗಳೆಲ್ಲ ಜೋಡಿಹಕ್ಕಿಗಳ ಪಿಸುಮಾತಿಗೆ ಸಾಕ್ಷಿಯಾಗುತ್ತವೆ. ಪ್ರೇಮ ಸಾಮ್ರಾಜ್ಯ ಕಟ್ಟುವ ಕಾತುರದಲ್ಲಿರುವ ಅವರಿಗೆ ಅಲ್ಲಿ ಹೂ ಬಿಟ್ಟು ನಳನಳಿಸುವ ಗಿಡಗಳ ಮೈದಡವಲೂ ಸಮಯವಿರುವುದಿಲ್ಲ!ನಾಲ್ಕು ಗಂಟೆ ಸಮೀಪಿಸುತ್ತಿದ್ದಂತೆ ವೃದ್ಧರು, ಗೃಹಿಣಿಯರು ತಮ್ಮ ದಿನದ 'ಧುಮುಧುಮು' ಪರಿಹರಿಸಿಕೊಳ್ಳುವ ದೃಷ್ಯ ಸರ್ವೆ ಸಾಮಾನ್ಯ. ಅವರುಗಳ ದುಃಖ ದುಮ್ಮಾನಗಳಿಗೆ ಅಲ್ಲಿರುವ ಮರಗಿಡಗಳು ಕಿವಿಯಾಗುತ್ತವೆ. ಸಂಜೆ ಏಳಾಗುತ್ತಿದ್ದಂತೆ ಜನ ಸಂದಣಿ ಕ್ರಮೇಣ ಕರಗಿ
ಪಾರ್ಕಿನಲ್ಲಿ ನೀರವ ಮೌನ ಆವರಿಸಿಕೊಳ್ಳುತ್ತದೆ. ಹಾಗೆಂದು ಈಗ ಪಾರ್ಕು ಬಿಡುವಾಯಿತೆಂದುಕೊಳ್ಳಬೇಡಿ! ದೂರದೂರಿಂದ ಹೊರಟು ಸೇರಬೇಕಾದ ಸ್ಠಳ ಸೇರಲಾಗದವರಿಗೆ; ದಿನವಿಡೀ ಅಲೆದು ದಣಿದ ಭಿಕ್ಷುಕರಿಗೆ ಆ ರಾತ್ರಿಯ ಸುಪ್ಪತ್ತಿಗೆಯಾಗುತ್ತದೆ ಪಾರ್ಕು.

ಷ್ಟಾದರೂ ಪಾರ್ಕಿನ ಗಿಡ ಮರಗಳ ದನಿಗೆ ಕಿವಿಯಾಗುವ ವ್ಯವಧಾನ ಪಾರ್ಕಿನ ಮಾಲಿಯಿಂದ ಹಿಡಿದು ನಿತ್ಯ ಬರುವ ವಯೋ ವೃಧ್ದರವರೆಗೆ ಯಾರೋಬ್ಬರಿಗೂ ಇಲ್ಲ! ಹಾಗಾಗಿ ಅಲ್ಲಿನ ಗಿಡಮರಗಳೆಲ್ಲ ಸದಾ ಎಲೆಯುದುರುವ ಕಾಲದ ಪ್ರತೀಕ್ಷೆಯಲ್ಲಿರುತ್ತವೆ - ಬೇಡವಾದ ಗರ್ಭ ಹೊತ್ತ ದಿನ ತುಂಬದ ಬಸುರಿಯೊಬ್ಬಳು ಪ್ರಸವಕ್ಕೆ ನಿರೀಕ್ಷಿಸುವಂತೆ...!

ಭಾನುವಾರ, ಅಕ್ಟೋಬರ್ 12, 2008

ಜಟಕಾ ಕುದುರೆ ಹತ್ತಿ ದಸ್ರಾ ನೊಡುಮಾ....








'ಶೋಭಾ'ಯಮಾನ ದಸರಾ ಸುತ್ತ ....



ಮೆಲುಕು ಹಾಕುವಂತಹ ಹತ್ತಾರು ಸಿಹಿ ನೆನಪು ಹಾಗೂ ಕೆಲವಾರು ಕಹಿ ನೆನಪುಗಳೊಂದಿಗೆ ಈ ಬಾರಿಯ ದಸರಾಗೆ ತೆರೆ ಬಿದ್ದಿದೆ. ಮೊಟ್ಟಮೊದಲಿಗೆ ನೆಮ್ಮದಿಯ ನಿಟ್ಟುಸಿರಿಟ್ಟವರೆಂದರೆ ಪೋಲೀಸರು.! ಉಗ್ರರ ಧಾಳಿಯ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಇತಿಹಾಸದಲ್ಲೇ ಅತೀ ಎನ್ನುವಷ್ಟು ಪೋಲೀಸರು ನಿಯೋಜಿತರಾಗಿದ್ದರು.
ರಂಭದ ದಿನಗಳಲ್ಲಿ ದಸರಾ ಅಖಾಡ ಖಾಲಿ ಕಂಡುಬಂದರೂ ನಂತರ ಜನ ಪ್ರವಾಹದ ಹರಿವು ಜೋರಾಗಿತ್ತು. ದಸರಾ ಕಾರ್ಯಕ್ರಮ ಉಗ್ರರ ಹಿಟ್ ಲಿಸ್ಟಿನಲ್ಲಿದ್ದರೂ ಜನ ಹೆದರದೆ "ಜೈ ಚಾಮುಂಡಿ" ಎಂದು ಜಂಬೂ ಸವಾರಿ ನೋಡಲು ಜಮಾಯಿಸಿದ್ದರು.
ಮೆರವಣಿಗೆ ವೀಕ್ಷಿಸಲು ಪಾಸ್ ಗಿಟ್ಟಿಸಿದವರದ್ದು ಒಂದು ರೀತಿಯ ಗೋಳಾದರೆ ಪಾಸ್ ರಹಿತರು ಕೊನೆ ಕ್ಷಣಗಳವರೆಗೂ ಪಾಸ್ ಪಡೆಯಲು ಪರದಾಡಿ ಸೋತು ಹಿಂತಿರುಗಿದರು. ಈ ಬಾರಿ ಪಾಸ್ ವಿತರಣೆ ಮಿತಿಯಲ್ಲಿದ್ದ ಕಾರಣ ಈ ದ್ರುಷ್ಯ ಸಾಮಾನ್ಯವಾಗಿತ್ತು. ಆದ್ರೂ ನಕಲಿ ಪಾಸ್ ವೀರರಿಗೇನೂ ಇದರಿಂದ ಲಾಸ್ ಆಗಲಿಲ್ಲ. ಮುನ್ನಾ ದಿನದಂದೇ ಪರ ಊರಿನ "ಮಿಕ"ಗಳನ್ನು ಹುಡುಕಿ ನಕಲಿ ಪಾಸ್ ನೀಡಿ ಹಣ ಪೀಕಿ ಫೇರಿ ಕಿತ್ತಿದ್ದರು!! ಕೊನೆಯಲ್ಲಿ ಅಸಲಿ - ನಕಲಿ ಪಾಸುದಾರರನ್ನು ನಿಭಾಯಿಸುವಲ್ಲಿ ಪರದಾಡಿದವರು ಪೋಲೀಸರು.
ಸರಾ ಮೆರವಣಿಗೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗವಹಿಸಿದ್ದ ಯುದ್ಧ ಟ್ಯಾಂಕರ್ ಗಳು, ತೇಜಸ್ ಯುದ್ಧ ವಿಮಾನ ಮೆರವಣಿಗೆಗೆ ಮೆರಗು ನೀಡಿದ್ದು ಬಿಟ್ಟರೆ ಬಹುತೇಕ ಸ್ತಬ್ಧ ಚಿತ್ರಗಳು ನಿರಾಸೆ ಹುಟ್ಟಿಸಿದವು. ಅಲಂಕೃತ ಅಂಬಾರಿಯನ್ನು ಹೊತ್ತ ಬಲರಾಮ ರೇವತಿ ಸರಳರೊಂದಿಗೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಬೀಳುತ್ತಿದ್ದ ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಬೆಳಿಗಿನಿಂದಲೇ ಕಾದು ಕೂತು ಮೆರವಣಿಗೆ ನೋಡಿದರು.
ಜಂಬೂ ಸವಾರಿಗೂ ಮುಂಚಿನ ದಿನಗಳೂ ಕೂಡ ಕಾರ್ಯಕ್ರಮಗಳ ಭರಾಟೆ ಜೋರಾಗೇ ಇತ್ತು. ಈ ಬಾರಿಯ ಹೊಸ ಸೇರ್ಪಡೆಗಳೆನಿಸಿದ ರೈತ ದಸರಾ, ಗ್ರಾಮೀಣ ದಸರಾ ಹಾಗೂ ಜನಪದೋತ್ಸವಗಳು ಉತ್ತಮ ಆರಂಭವನ್ನು ಸೂಚಿಸಿದವು. ಗೋಲ್ಡ್ ಕಾರ್ಡ್ ಹೋಲ್ಡರ್ ಗಳಿಗೆ ಎಲ್ಲ ಕಾರ್ಯಕ್ರಮಗಳಿಗೂ ಸ್ಥಳ ಕಾಯ್ದಿರಿಸಲಾಗಿತ್ತಾದರೂ ಯಾವುದಕ್ಕೆ ಹೋಗಬೇಕೆಂಬ ಗೋಜಲಿನಿಂದ ಕೊನೆಗೆ ಖಾಲಿ ಉಳಿದದ್ದು ಅರಮನೆ ಮುಂಭಾಗದ ಖುರ್ಚಿಗಳು.!!
ಳೆದ ಬಾರಿ ವರುಣನ ಮುನಿಸಿನಿಂದ ಮಸುಕಾಗಿದ್ದ 'ಏರ್ ಷೋ' ಈ ಬಾರಿ ಸಾಂಗವಾಗಿ ನಡೆಯಿತು.ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಮೆರೆಯುತ್ತಿದ್ದ ಯುವದಸರಾ ಕಾರ್ಯಕ್ರಮಕ್ಕೆ ಸ್ವಲ್ಪ ಅಂಕುಶ ಬಿದ್ದಿತ್ತಾದರೂ "ಯುವಶಕ್ತಿ"(!) ಅದರಿಂದ ನಿರಾಶರಾಗಲಿಲ್ಲ. ಯುವ ದಸರಾದಲ್ಲಿ ಶಿವಮಣಿಯ ಡ್ರಮ್ಸ್; ರಾಜೇಶ್ ಕೃಷ್ಣನ್ ಸಾಂಗ್ಸ್ ಮೋಡಿಗೆ ಮರುಳಾದ ಪೋಲೀಸರೂ "ಈ ಯುನಿಫಾರ್ಮ್ ಇಲ್ದಿದ್ರೆ ನಾವೂ ನಾಲ್ಕು ಸ್ಟೆಪ್ ಹಾಕ್ಬಹುದಿತ್ರೀ" ಎಂದು ಮರುಗಿದರು!
ತರೆಡೆ ನೆಡೆದ ಸಂಗೀತ, ಭರತನಾಟ್ಯಗಳಂತಹ ಕಾರ್ಯಕ್ರಮಗಳಿಗೆ ಒಂದು ವರ್ಗದ ಪ್ರೇಕ್ಷಕರ ಹಾಜರಾತಿ ಮಾತ್ರ ಇತ್ತು. ರಂಗಾಯಣದಲ್ಲಿ ನಡೆದ ನವರಾತ್ರಿ ರಂಗೋತ್ಸವದಲ್ಲಿ ವೈವಿಧ್ಯಮಯ ನಾಟಕಗಳು ಪ್ರದರ್ಶಿಸಲ್ಪಟ್ಟವಾದರೂ; ಎರಡನೆ ಪ್ರದರ್ಶನದಲ್ಲಿ ನಟರು ಜೋಷ್ ಕಳೆದುಕೊಂಡವರಂತೆ ಕಂಡುಬಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶೋಭಾ ಕರಂದ್ಲಾಜೆ ಆರಂಭದಲ್ಲಿ ಸಿದ್ಧತೆಗಳನ್ನು ಉದ್ಯಾನ ನಗರಿಯಲ್ಲಿಯೇ ಪ್ರಾರಂಭಿಸಿದರಾದರೂ ವ್ಯವಸ್ಥೆ ಹದಗೆಡುತ್ತಿರುವುದನ್ನು ಮನಗಂಡು ಅರಮನೆ ನಗರಿಯಲ್ಲಿಯೇ ಮೊಕ್ಕಾಂ ಮಾಡಿ ಅಧಿಕಾರಿಗಳಿಂದ ಕೆಲಸ ತೆಗೆಸಿದರು. ಇಲ್ಲದಿದ್ದರೆ ಅವ್ಯವಸ್ಥೆ ಮೇರೆ ಮೀರುತ್ತಿತ್ತು. ದಸರಾದುದ್ದಕ್ಕೂ ಸಚಿವರ ಮಿಂಚಿನ ಸಂಚಾರ ಅಧಿಕಾರಿಗಳಲ್ಲಿ ಚುರುಕು ಮೂಡಿಸಿ ಕೆಲಸಗಳು ಸಾಂಗವಾಗಿ ನಡೆಯುವಂತಾಯಿತು. ಅಷ್ಟಾಗಿಯೂ ಕೆಲವರು ಒಲ್ಲದ ಗಂಡಂದಿರಾಗಿ ಮೊಸರಲ್ಲಿ ಕಲ್ಲು ಹುಡುಕಿದರು. ಒಟ್ಟಾರೆಯಾಗಿ ದಸರಾ ಅಚ್ಚುಕಟ್ಟಾಗಿ ನಡೆಯಿತು. ದೇಶ ವಿದೇಶಗಳಿಂದ ಬಂದವರು ದಿಲ್ ಖುಷ್ ಆದರು. ಮೈಸೂರಿನವ್ರಾಗಿದ್ದೂ 'ನಾನಾ ಕಾರಣ'ಗಳಿಂದ ದಸರಾ ತಪ್ಪಿಸಿಕೊಂಡವರು ಮರುದಿನ ಎದ್ದು ಮರುಗಿದರು..!!!!
ಚಿತ್ರ ಕೃಪೆ: ಇಂಟರ್ನೆಟ್.

ಶನಿವಾರ, ಅಕ್ಟೋಬರ್ 4, 2008

ಹಿಂದಿನ ಬೆಂಚಿನ ಹುಡುಗರು ನಾವು.....

ದೇಕೋ ಗೊತ್ತಿಲ್ಲ,ಶಾಲಾ ಕಾಲೇಜು ದಿನಗಳಲ್ಲಿ ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದುದನ್ನು ನೆನಪಿಸಿಕೊಂಡು ಪುಳಕಿತರಾಗುವುದರಲ್ಲೂ ಒಂಥರಾ ಸೊಗಸಿದೆ ! ಕಾಲೇಜು ದಿನಗಳಲ್ಲಿ ಕೊನೆ ಬೆಂಚಿನಲ್ಲಿ ಕುಳಿತುಕೊಂಡು ಮಾಡುತ್ತಿದ್ದ ಕೀಟಲೆ, ತಥಾಕಥಿತ ಉಪನ್ಯಾಸಕರಿಗೆ ನೀಡುತ್ತಿದ್ದ ಕೋಟಲೆಗಳನ್ನು ನೆನಸಿಕೊಂಡರೆ ಮನಸಿಗೆ ಈಗಲೂ ರೋಮಾಂಚನದ ವರ್ಷಧಾರೆ.

ಹೈಸ್ಕೂಲು ಸೇರಿದಾಗಲೇ ಹಿಂದಿನ ಬೆಂಚಿನಲ್ಲಿ ಆಸೀನನಾಗಬೇಕೆಂಬ ಮಹದಾಸೆ ನನಗಿತ್ತಾದರೂ; ಪಿಟಿ ಮಾಸ್ಟರ್ ಮುಂದಾಳತ್ವದಲ್ಲಿ ಹೈಟು ಪ್ರಕಾರ ಸೀಟು ಹಂಚಿಕೆಯಾಗುತ್ತಿತ್ತಾದ್ದರಿಂದ ಅದು ಸಾಧ್ಯವಾಗಲ್ಲಿಲ್ಲ. ಮೂರು ವರ್ಷ ಮುಂದಿನ ಬೆಂಚಿನಲ್ಲಿ ಕುಳಿತೇ ಕಳೆಯಬೇಕಾಯಿತು. ಆದರೂ ಅವಕಾಶ ಸಿಕ್ಕಾಗಲೆಲ್ಲ ಹಿಂದಿನ ಬೆಂಚಿನಲ್ಲಿ ಕುಳಿತು ಇಡೀ ತರಗತಿಯನ್ನು 'ಅವಲೋಕಿಸುವ' ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಪಿಯುಸಿಗೆ ಬಂದಮೇಲೆ ಕ್ಲಾಸುರೂಮೆಂಬುದು ನಮ್ಮ ಸ್ವಂತ ಸಾಮ್ರಾಜ್ಯವೆಂಬಂತಾಗಿಹೋಗಿತ್ತು. ನಮ್ಮ ಸೆಕ್ಷನ್ನಿನಲ್ಲಿ ಇದ್ದಿದ್ದು ಬರೋಬ್ಬರಿ ೧೨೦ ಜನ ! ನಾನು ಸ್ವಲ್ಪ ಕಡಿಮೆ ಎತ್ತರದವನಾದ್ದರಿಂದ ಲಾಸ್ಟ್ ಬೆಂಚಿನಲ್ಲಿ ಕುಳಿತರೆ ಲೆಕ್ಚರರುಗಳಿಗೆ ಕಾಣಿಸುತ್ತಲೇ ಇರಲಿಲ್ಲ. ಹೊಸ ಉಪನ್ಯಾಸಕರ ಆಗಮನವಾಯಿತೆಂದರೆ ನಮ್ಮ ರಾಕೆಟ್ ಧಾಳಿ ಆರಂಭವಾಗಿಬಿಡುತ್ತಿತ್ತು. ಹೈಸ್ಕೂಲಿನಲ್ಲಿ ಬರೆದು ಮುಗಿಸಿದ ನೋಟ್ ಪುಸ್ತಕದ ಹಾಳೆಗಳೆಲ್ಲ ರಾಕೆಟ್ ಆಗಿ ಮರುಬಳಕೆಯಾಗುತ್ತಿದ್ದವು. ಇನ್ನು ಕೆಲ ಲೆಕ್ಚರರ್ ಗಳ ಮೇಲೆ ಪ್ರಶ್ನೆಗಳ ಸುರಿಮಳೆ. ನಮ್ಮ ಈ ಉಪಟಳಗಳನ್ನು ಸಹಿಸಲಾಗದೆ ಕೆಲವರು ಬೇರೆ ಸೆಕ್ಷನ್ನಿಗೆ ಬದಲಾಯಿಸಿಕೊಂಡಿದ್ದುಂಟು. ಈ ಕೀ (ಕೋ)ಟಲೆಗಳೆಲ್ಲ ಬೋರಾದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನಿದ್ರಾದೇವಿಗೆ ಶರಣಾಗಿಬಿಡುತ್ತಿದ್ದೆವು.

ಡಿಗ್ರಿಯಲ್ಲಿ ಹಿಂದಿನ ಬೆಂಚು ಸಿಗಲಿಲ್ಲವಾದರೂ ಅಲ್ಲಿದ್ದು ಮಾಡುವ ಕೆಲಸವನ್ನು ಮುಂದಿನ ಬೆಂಚಿನಲ್ಲಿದ್ದುಕೊಂಡೇ ಮಾಡುತ್ತಿದ್ದೆವು.! ಆದರೆ ಅದರಲ್ಲಿ ಹೆಚ್ಚಿನ ಸಮಯವನ್ನು ನಿದ್ರಾದೇವಿ ನುಂಗಿಬಿಡುತ್ತಿದ್ದಳು. ನಾನಂತೂ ಉಡುಪಿ ಮಠದಲ್ಲಿ ಗಡದ್ದಾಗಿ ಪೋಣಿಸಿ ಕ್ಲಾಸಿಗೆ ಹೋಗುತ್ತಿದ್ದೆನಾದ್ದರಿಂದ ಮಧ್ಯಾಹ್ನದ ಅವಧಿಯೆಂದರೆ ನಿದ್ರಾದೇವಿಯ ಉಪಾಸನೆಯೇ ಆಗಿತ್ತು. ಆದರೂ ಒಮ್ಮೆಯೂ ಲೆಕ್ಚರರುಗಳ ಕೈಯಲ್ಲಿ ಸಿಕ್ಕಿಬಿದ್ದುದಿಲ್ಲ. ಇದು ನಮ್ಮ ಕ್ಲಾಸಿನ ಹುಡುಗಿಯರಿಗೂ ಉತ್ತರ ಸಿಗದ ಒಗಟಾಗಿತ್ತು. ಹೀಗೆಂದು ಹುಡುಗಿಯೊಬ್ಬಳು ಕೊನೆ ವರ್ಷ ಆಟೋಗ್ರಾಫ್ ನಲ್ಲಿ ಬರೆದೂ ಬಿಟ್ಟಿದ್ದಳು.!ವಾಸ್ತವವೆಂದರೆ, ನನ್ನ ಸ್ಕೋರ್ ಗ್ರಾಫ್ ಯಾವಾಗಲೂ ಎಪ್ಪತ್ತೈದರ ಮೇಲಿರುತ್ತಿದ್ದುದರಿಂದ ಹಾಗೂ ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ 'ಕೈವಾಡ' ವಿರುತ್ತಿದ್ದರಿಂದ ಇದಕ್ಕೆಲ್ಲ ನನಗೆ ಕೊಂಚ ವಿನಾಯ್ತಿಯಿತ್ತು.
ಡಿಗ್ರಿ ಮುಗಿಸಿ ವರ್ಷಗಳೇ ಕಳೆದಿದ್ದರೂ ಈಗಲೂ ಕಾಲೇಜಿಗೆ ಹೋಗುವವರನ್ನು ಕಂಡಾಗ ಹಿಂದಿನ ಬೆಂಚಿನ ನೆನಪು ಮರುಕಳಿಸಿ ಮುದ ನೀಡುತ್ತದೆ.