'ಶೋಭಾ'ಯಮಾನ ದಸರಾ ಸುತ್ತ ....
ಮೆಲುಕು ಹಾಕುವಂತಹ ಹತ್ತಾರು ಸಿಹಿ ನೆನಪು ಹಾಗೂ ಕೆಲವಾರು ಕಹಿ ನೆನಪುಗಳೊಂದಿಗೆ ಈ ಬಾರಿಯ ದಸರಾಗೆ ತೆರೆ ಬಿದ್ದಿದೆ. ಮೊಟ್ಟಮೊದಲಿಗೆ ನೆಮ್ಮದಿಯ ನಿಟ್ಟುಸಿರಿಟ್ಟವರೆಂದರೆ ಪೋಲೀಸರು.! ಉಗ್ರರ ಧಾಳಿಯ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಇತಿಹಾಸದಲ್ಲೇ ಅತೀ ಎನ್ನುವಷ್ಟು ಪೋಲೀಸರು ನಿಯೋಜಿತರಾಗಿದ್ದರು.
ಆರಂಭದ ದಿನಗಳಲ್ಲಿ ದಸರಾ ಅಖಾಡ ಖಾಲಿ ಕಂಡುಬಂದರೂ ನಂತರ ಜನ ಪ್ರವಾಹದ ಹರಿವು ಜೋರಾಗಿತ್ತು. ದಸರಾ ಕಾರ್ಯಕ್ರಮ ಉಗ್ರರ ಹಿಟ್ ಲಿಸ್ಟಿನಲ್ಲಿದ್ದರೂ ಜನ ಹೆದರದೆ "ಜೈ ಚಾಮುಂಡಿ" ಎಂದು ಜಂಬೂ ಸವಾರಿ ನೋಡಲು ಜಮಾಯಿಸಿದ್ದರು.
ಮೆರವಣಿಗೆ ವೀಕ್ಷಿಸಲು ಪಾಸ್ ಗಿಟ್ಟಿಸಿದವರದ್ದು ಒಂದು ರೀತಿಯ ಗೋಳಾದರೆ ಪಾಸ್ ರಹಿತರು ಕೊನೆ ಕ್ಷಣಗಳವರೆಗೂ ಪಾಸ್ ಪಡೆಯಲು ಪರದಾಡಿ ಸೋತು ಹಿಂತಿರುಗಿದರು. ಈ ಬಾರಿ ಪಾಸ್ ವಿತರಣೆ ಮಿತಿಯಲ್ಲಿದ್ದ ಕಾರಣ ಈ ದ್ರುಷ್ಯ ಸಾಮಾನ್ಯವಾಗಿತ್ತು. ಆದ್ರೂ ನಕಲಿ ಪಾಸ್ ವೀರರಿಗೇನೂ ಇದರಿಂದ ಲಾಸ್ ಆಗಲಿಲ್ಲ. ಮುನ್ನಾ ದಿನದಂದೇ ಪರ ಊರಿನ "ಮಿಕ"ಗಳನ್ನು ಹುಡುಕಿ ನಕಲಿ ಪಾಸ್ ನೀಡಿ ಹಣ ಪೀಕಿ ಫೇರಿ ಕಿತ್ತಿದ್ದರು!! ಕೊನೆಯಲ್ಲಿ ಅಸಲಿ - ನಕಲಿ ಪಾಸುದಾರರನ್ನು ನಿಭಾಯಿಸುವಲ್ಲಿ ಪರದಾಡಿದವರು ಪೋಲೀಸರು.
ದಸರಾ ಮೆರವಣಿಗೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗವಹಿಸಿದ್ದ ಯುದ್ಧ ಟ್ಯಾಂಕರ್ ಗಳು, ತೇಜಸ್ ಯುದ್ಧ ವಿಮಾನ ಮೆರವಣಿಗೆಗೆ ಮೆರಗು ನೀಡಿದ್ದು ಬಿಟ್ಟರೆ ಬಹುತೇಕ ಸ್ತಬ್ಧ ಚಿತ್ರಗಳು ನಿರಾಸೆ ಹುಟ್ಟಿಸಿದವು. ಅಲಂಕೃತ ಅಂಬಾರಿಯನ್ನು ಹೊತ್ತ ಬಲರಾಮ ರೇವತಿ ಸರಳರೊಂದಿಗೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಬೀಳುತ್ತಿದ್ದ ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಬೆಳಿಗಿನಿಂದಲೇ ಕಾದು ಕೂತು ಮೆರವಣಿಗೆ ನೋಡಿದರು.
ಜಂಬೂ ಸವಾರಿಗೂ ಮುಂಚಿನ ದಿನಗಳೂ ಕೂಡ ಕಾರ್ಯಕ್ರಮಗಳ ಭರಾಟೆ ಜೋರಾಗೇ ಇತ್ತು. ಈ ಬಾರಿಯ ಹೊಸ ಸೇರ್ಪಡೆಗಳೆನಿಸಿದ ರೈತ ದಸರಾ, ಗ್ರಾಮೀಣ ದಸರಾ ಹಾಗೂ ಜನಪದೋತ್ಸವಗಳು ಉತ್ತಮ ಆರಂಭವನ್ನು ಸೂಚಿಸಿದವು. ಗೋಲ್ಡ್ ಕಾರ್ಡ್ ಹೋಲ್ಡರ್ ಗಳಿಗೆ ಎಲ್ಲ ಕಾರ್ಯಕ್ರಮಗಳಿಗೂ ಸ್ಥಳ ಕಾಯ್ದಿರಿಸಲಾಗಿತ್ತಾದರೂ ಯಾವುದಕ್ಕೆ ಹೋಗಬೇಕೆಂಬ ಗೋಜಲಿನಿಂದ ಕೊನೆಗೆ ಖಾಲಿ ಉಳಿದದ್ದು ಅರಮನೆ ಮುಂಭಾಗದ ಖುರ್ಚಿಗಳು.!!
ಕಳೆದ ಬಾರಿ ವರುಣನ ಮುನಿಸಿನಿಂದ ಮಸುಕಾಗಿದ್ದ 'ಏರ್ ಷೋ' ಈ ಬಾರಿ ಸಾಂಗವಾಗಿ ನಡೆಯಿತು.ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಮೆರೆಯುತ್ತಿದ್ದ ಯುವದಸರಾ ಕಾರ್ಯಕ್ರಮಕ್ಕೆ ಸ್ವಲ್ಪ ಅಂಕುಶ ಬಿದ್ದಿತ್ತಾದರೂ "ಯುವಶಕ್ತಿ"(!) ಅದರಿಂದ ನಿರಾಶರಾಗಲಿಲ್ಲ. ಯುವ ದಸರಾದಲ್ಲಿ ಶಿವಮಣಿಯ ಡ್ರಮ್ಸ್; ರಾಜೇಶ್ ಕೃಷ್ಣನ್ ಸಾಂಗ್ಸ್ ಮೋಡಿಗೆ ಮರುಳಾದ ಪೋಲೀಸರೂ "ಈ ಯುನಿಫಾರ್ಮ್ ಇಲ್ದಿದ್ರೆ ನಾವೂ ನಾಲ್ಕು ಸ್ಟೆಪ್ ಹಾಕ್ಬಹುದಿತ್ರೀ" ಎಂದು ಮರುಗಿದರು!
ಇತರೆಡೆ ನೆಡೆದ ಸಂಗೀತ, ಭರತನಾಟ್ಯಗಳಂತಹ ಕಾರ್ಯಕ್ರಮಗಳಿಗೆ ಒಂದು ವರ್ಗದ ಪ್ರೇಕ್ಷಕರ ಹಾಜರಾತಿ ಮಾತ್ರ ಇತ್ತು. ರಂಗಾಯಣದಲ್ಲಿ ನಡೆದ ನವರಾತ್ರಿ ರಂಗೋತ್ಸವದಲ್ಲಿ ವೈವಿಧ್ಯಮಯ ನಾಟಕಗಳು ಪ್ರದರ್ಶಿಸಲ್ಪಟ್ಟವಾದರೂ; ಎರಡನೆ ಪ್ರದರ್ಶನದಲ್ಲಿ ನಟರು ಜೋಷ್ ಕಳೆದುಕೊಂಡವರಂತೆ ಕಂಡುಬಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶೋಭಾ ಕರಂದ್ಲಾಜೆ ಆರಂಭದಲ್ಲಿ ಸಿದ್ಧತೆಗಳನ್ನು ಉದ್ಯಾನ ನಗರಿಯಲ್ಲಿಯೇ ಪ್ರಾರಂಭಿಸಿದರಾದರೂ ವ್ಯವಸ್ಥೆ ಹದಗೆಡುತ್ತಿರುವುದನ್ನು ಮನಗಂಡು ಅರಮನೆ ನಗರಿಯಲ್ಲಿಯೇ ಮೊಕ್ಕಾಂ ಮಾಡಿ ಅಧಿಕಾರಿಗಳಿಂದ ಕೆಲಸ ತೆಗೆಸಿದರು. ಇಲ್ಲದಿದ್ದರೆ ಅವ್ಯವಸ್ಥೆ ಮೇರೆ ಮೀರುತ್ತಿತ್ತು. ದಸರಾದುದ್ದಕ್ಕೂ ಸಚಿವರ ಮಿಂಚಿನ ಸಂಚಾರ ಅಧಿಕಾರಿಗಳಲ್ಲಿ ಚುರುಕು ಮೂಡಿಸಿ ಕೆಲಸಗಳು ಸಾಂಗವಾಗಿ ನಡೆಯುವಂತಾಯಿತು. ಅಷ್ಟಾಗಿಯೂ ಕೆಲವರು ಒಲ್ಲದ ಗಂಡಂದಿರಾಗಿ ಮೊಸರಲ್ಲಿ ಕಲ್ಲು ಹುಡುಕಿದರು. ಒಟ್ಟಾರೆಯಾಗಿ ದಸರಾ ಅಚ್ಚುಕಟ್ಟಾಗಿ ನಡೆಯಿತು. ದೇಶ ವಿದೇಶಗಳಿಂದ ಬಂದವರು ದಿಲ್ ಖುಷ್ ಆದರು. ಮೈಸೂರಿನವ್ರಾಗಿದ್ದೂ 'ನಾನಾ ಕಾರಣ'ಗಳಿಂದ ದಸರಾ ತಪ್ಪಿಸಿಕೊಂಡವರು ಮರುದಿನ ಎದ್ದು ಮರುಗಿದರು..!!!!
ಚಿತ್ರ ಕೃಪೆ: ಇಂಟರ್ನೆಟ್.
1 ಕಾಮೆಂಟ್:
ದಸರಾವನ್ನೂ ಎಷ್ಟು ಚೆನ್ನಾಗಿ ಅನುಭವಿಸಿದ್ದೀರಿ ! ಅದು ಒಂದು ಬಿಡದೆ ! ನಿಮ್ಮ ಬರವಣಿಗೆಯಲ್ಲೆ ತಿಳಿಯುತ್ತೆ. ನಿಮ್ಮ invalvement ಎಷ್ಟಿತ್ತು ಅಂತ. good keep it up !
ಶಿವು.ಕೆ
ಕಾಮೆಂಟ್ ಪೋಸ್ಟ್ ಮಾಡಿ