ಮಂಗಳವಾರ, ಜನವರಿ 20, 2009

ಮಾಗಿ ಚಳಿಗೆ ಮೈಯೊಡ್ಡಿ

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.


ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.


ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.

ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು.

ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.

ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.

ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!

ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!

[ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ.
ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]


ಚಿತ್ರ ಕೃಪೆ: ಇಂಟರ್ನೆಟ್ಶನಿವಾರ, ಜನವರಿ 3, 2009

"ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು

ದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು.

ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು.

ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ!

ಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು

ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು.

ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು.

ಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು.

ಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.ಚಿತ್ರ ಕೃಪೆ: ಇಂಟರ್ನೆಟ್