ಅದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ.
ಆ ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು.
ಈ ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ.
ಅಂದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು.
ಅಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು.
ಮರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.
ಫೋಟೊ ಕೃಪೆ: ಇಂಟರ್ನೆಟ್