ನಾನು ರಾತ್ರಿ...... ಹಗಲಿಡೀ ದುಡಿದು ದಣಿದವರ ಪಾಲಿಗೆ ಶಾಂತಿ,ವಿಶ್ರಾಂತಿ ನೀಡುವ ಸಮಯವಾದರೆ,ದುಡಿಮೆ ಹುಡುಕಿ ದಣಿದವರು,ದುಡಿಯ ಹೊರಟು ಸೋತವರು ಹಗಲಿಡೀ ಧರಿಸಿದ ಮುಖವಾಡ ಕಳಚಿಟ್ಟು ನಿರುಮ್ಮಳವಾಗುವ ಅಮೃತಘಳಿಗೆ. "ಬೆಳಕಿಗೆ" ಬಾರದವರು ತುತ್ತಿನ ಚೀಲ ತುಂಬಿಸಿಕೊಳ್ಳುವ ಪರ್ವಕಾಲ. ಬೆಳಕು ನೀಡುತ್ತೇವೆಂದು ಬೀಗುವವರ ಕತ್ತಲೆಯ ವ್ಯವಹಾರ ನಡೆಯುವ ಸಂಧಿ ಸಮಯ. ಅಸಂಖ್ಯಾತ ನೋವು, ನಿಟ್ಟುಸಿರು, ನಿರಾಸೆಗಳನ್ನು ನನ್ನ ಗೂಢ ಗರ್ಭದೊಳಕ್ಕೆ ಸೆಳೆದು ಸಾಯಿಸುವ ದುಶ್ಟ ಸಮಯ.
ನಾನು ರಾತ್ರಿ..... ಬೆಳಕು ಬೆನ್ನಿಗೇ ಇದ್ದರೂ ಎಂದೆಂದೂ ಸಂಧಿಸಲಾಗದ ದುರ್ದೈವಿ. ಬಾನಲ್ಲಿ ಬೆಳ್ಳಿ ಕಿರಣ ಕಾಣುತ್ತಿದ್ದಂತೆ ಓಡಿ ಮರೆಯಾಗುವ ಮುಖೇಡಿ. ನೀವು ಹಚ್ಚುವ ದೀಪಕ್ಕೆ ಅರೆನಗ್ನಗೊಳ್ಳುವ ಲಜ್ಜೆಗೇಡಿ.ಸೂರ್ಯ ಮುಳುಗಿದ ಕೂಡಲೇ ಕಳ್ಳಹೆಜ್ಜೆ ಇಟ್ಟು ಬರುವ ಕರಾಳ ವದನ.
ನಿಜವಾಗಿಯೂ ಪಾಪಿ (ರಾತ್ರಿ) ಚಿರಾಯು. ಪ್ರಪಂಚದಲ್ಲಿ ಬೆಳಕಿರುವವರೆಗೂ ನನಗೂ ಪೂರ್ಣ ಆಯಸ್ಸು. ಆದರೂ ಬೆಳಕಿಗಿಂತ ನಾನೇ ಎಲ್ಲರಿಗೂ ಇಶ್ಟ. ಇದಕ್ಕೆ ಶಿಶ್ಟರು - ದುಶ್ಟರೆಂಬ ಭೇದವಿಲ್ಲ. ಶಿಶ್ಟರು ಉಂಡಿದ್ದನ್ನು ಅರಗಿಸಿಕೊಳ್ಳುವ ಕಾಲವಾದರೆ ದುಶ್ಟರು ಕರಗಿಸಿದ್ದನ್ನು ಮತ್ತೆ ಗಳಿಸುವ ಕಾಲ. ಒಟ್ಟಿನಲ್ಲಿ ರೂಪ ಕರಾಳವಾದರೂ ಎಲ್ಲರ ಪ್ರೀತಿ ನನಗೆ ಹೇ(ಧಾ)ರಾಳ.
ಕೆಲವರಿಗೆ ನಾನೆಂದರೆ ಎಲ್ಲಿಲ್ಲದ ಭಯ.ಇನ್ನು ಕೆಲವರಿಗೆ ( ಅವರ ಭಯ ಪಕ್ಕದವರಿಗೆ ಕಾಣಿಸದಂತೆ ಕಾಯುತ್ತೇನಲ್ಲ ಹಾಗಾಗಿ) ಧೈರ್ಯ. ಆದರೂ ನಾನು ಬರುವ ಸಮಯವಾಗುತ್ತಿದ್ದಂತೆ ಎಂಥ ಧೈರ್ಯಸ್ಥನೂ ತನಗೆ ತಾನೇ ಎಚ್ಚರಿಸಿಕೊಳ್ಳುತ್ತಾನೆ; ಜ್ವಾಪಾನ ರಾತ್ರಿಯಾತು..
ಟಿಪ್ಪಣಿ: ೧೯-೧೨-೨೦೦೭ರ "ವಿಜಯ ಕರ್ನಾಟಕ" ಮೈಸೂರು ಆವ್ರುತ್ತಿಯ "ರೂಪಕ" ಪುರವಣಿಯಲ್ಲಿ ಪ್ರಕಟವಾದ ಲೇಖನ.
1 ಕಾಮೆಂಟ್:
ರಾತ್ರಿಗೂ ಒಂದು ವ್ಯಕ್ತಿತ್ವ ಮೂಡಿಸಿದ್ದೀರಿ. ನಾನೂ ರಾತ್ರಿಯಲ್ಲೆ
ನನ್ನ ಬ್ಲಾಗ್ ನೋಡೋದು, ಬರೆಯೋದು. good.
ಶಿವು.ಕೆ.
ನನ್ನ ಬ್ಲಾಗಿಗೊಂದು ನಾಚಿಕೆಯಿಲ್ಲದ್ ಪಾರಿವಾಳ ಕುಟುಂಬ ಬಂದಿದೆ ! ಬನ್ನಿ ನೋಡಿ !
ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ" ಯಲ್ಲಿ ಮತ್ತೊಂದು ಹೊಸ ಲೇಖನ ತಳ್ಳಿದ್ದೇನೆ ನೋಡಿ ನಿಮಗಿಷ್ಟವಾಗಬಹುದು.
ಕಾಮೆಂಟ್ ಪೋಸ್ಟ್ ಮಾಡಿ