ಅದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು.
ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು.
ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ!
ಸಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು
ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು.
ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು.
ಆಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು.
ನಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.
ಚಿತ್ರ ಕೃಪೆ: ಇಂಟರ್ನೆಟ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
7 ಕಾಮೆಂಟ್‌ಗಳು:
ವ್ಯಾಪಾರಂ ದ್ರೋಹ ಚಿಂತನಂ ಎಂಬುದು ಸಣ್ಣ ವ್ಯಾಪಾರಿಗಳಿಗಿಂತ "ದೊಡ್ಡವರು" ಚೆನ್ನಾಗಿ ಬಲ್ಲರು.
ಅಶೋಕ ಉಚ್ಚಂಗಿ.
http://mysoremallige01.blogspot.com/
ha ha ha tumba chennagide neevu helida reeti
ರಾಘವೇಂದ್ರ,
ಶರ್ಟುಗಳ ಪುರಾಣ ಚೆನ್ನಾಗಿದೆ...ಇದು ಎಲ್ಲಾ ಮಾಲು ಸೇಲುಗಳಲ್ಲಿ ನಡೆಯುವ ಕಥೆ....ಇದೆಲ್ಲಾ ನನಗೆ ಚೆನ್ನಾಗಿ ಅನುಭವವಾಗಿರುವುದರಿಂದ ನಾನಂತೂ ನೇರ ಸಂಡೆ ಬಜಾರಿನ ಪುಟ್‌ಪಾತ್ ಮೇಲೆ ಟಿ ಶರ್ಟ್ ಗಳನ್ನು ಕೊಳ್ಳುತ್ತೇನೆ...
@ ಅಶೋಕ್
ನಿಜ. ಎಷ್ಟೋ ಸಲ ದೊಡ್ಡವರ ಸಣ್ಣನತಗಳು ಅವರು ದೊಡ್ಡವರೆಂಬ ಕಾರಣಕ್ಕಾಗಿಯೇ ಬೆಳಕಿಗೆ ಬಾರದೆ ಮರೆಯಾಗಿಬಿಡುತ್ತವೆ.
@ ಶ್ರೀಶಂ
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.
@ ಶಿವು
ನಿಜ. ಈ ಮಾಲುಗಳ ಗೋಲ್ಮಾಲ್ ಸೇಲ್ ಗಳಲ್ಲಿ ಕೊಳ್ಳುವುದಕ್ಕಿಂತ ಅದೇ ಎಷ್ಟೋ ವಾಸಿ. ಆದರೂ ಅವುಗಳ ಗೀಳು ಮಾತ್ರ ಹೆಚ್ಚಿನವರನ್ನು ಇನ್ನೂ ಬಿಟ್ಟಿಲ್ಲ.
- ರಾಘವೇಂದ್ರ ಕೆಸವಿನಮನೆ.
ರಾಘವೇಂದ್ರರವರೆ...
೫ ಶರ್ಟ್ ಖರೀದಿಸಿದರೆ ೫ ಶರ್ಟ್ ಫ್ರೀ...!
ನನಗೆ ತಲೆ ಕೆಟ್ಟು ಹೋಯಿತು...
ನಮಗೆ ಏಕೆ ೫ ಶರ್ಟು..?
ಮತ್ತೆ ೫ ಶರ್ಟ್ ಫ್ರೀ...
ಬಿಸಿನೆಸ್ ಎಲ್ಲ ಡಲ್ಲು ಹೊಡೆದು ಒಂದು ಶರ್ಟ್ ಹಾಕ್ಕೊಳ್ಳೊದೇ ದೊಡ್ಡ ವಿಚಾರ..!
ಒಳಗೆ ಹೋಗಿ ರೇಟ್ ಕೇಳಿದಾಗ....
ಒಂದು ಶರ್ಟಿನ ಬೆಲೆ ೧೫೦೦.. ರುಪಾಯಿಗಳು ಮಾತ್ರಾ...
ತೆರಿಗೆಗಳು ಪ್ರತ್ಯೇಕ..!
(ಕನಕಪುರ ರೋಡ್, ಸ್ಪೆನ್ಸರ್ ಪಕ್ಕದಲ್ಲಿ ಇನ್ನೂ ಆಫರ್ ಇದೆ)
ಚಂದವಾದ ಬರಹಕ್ಕೆ ಅಭಿನಂದನೆಗಳು...
ಹಲೋ ರಾಘವೇಂದ್ರ..
ಏನ್ ಬಾಸೂ ಟೀ-ಶರ್ಟು ಸೇಲಾ? ಚೆನ್ನಾಗಿ ಬರೆದಿದ್ದೀರಪ್ಪ..
-ಚಿತ್ರಾ
@ ಸಿಮೆಂಟು ಮರಳಿನ ಮಧ್ಯೆ,
ಹ್ಹ ಹ್ಹ...ಮೊದಲು ಆಸೆ ಹುಟ್ಟಿಸಿ ಆಮೇಲೆ ಚೌರ ಮಾಡುವುದೇ ಎಲ್ಲಾ ಗೋಲ್ 'ಮಾಲ್'ಗಳ ಅಜೆಂಡಾ ಅಂತ ಕಾಣುತ್ತೆ.!
@ ಚಿತ್ರಾ
ಥ್ಯಾಂಕ್ಸ್! ಹೀಗೇ ಬರುತ್ತಿರಿ.
- ರಾಘವೇಂದ್ರ ಕೆಸವಿನಮನೆ.
ಕಾಮೆಂಟ್ ಪೋಸ್ಟ್ ಮಾಡಿ