ಗುರುವಾರ, ಆಗಸ್ಟ್ 26, 2010

ಬಹುದಿನಗಳ ನಂತರ ಬ್ಲಾಗಂಗಳಕ್ಕೆ ಮರಳಿ

ಇವತ್ತು... ನಾಳೆ ಬ್ಲಾಗ್ ಅಪ್ ಡೇಟ್ ಮಾಡಬೇಕು.. ಎಂದುಕೊಳ್ಳುತ್ತಲೇ ವರ್ಷ ಕಳೆದುಹೋದರೂ 'ಜಡಭರತ' ಮನಸ್ಸಿನ ಮುನಿಸಿನಿಂದ ಸಾಧ್ಯವಾಗಲೇ ಇಲ್ಲ. ಈ ನಡುವೆ ಪರಿಚಯಸ್ಥ ಅಭಿಮಾನಿ(ನಿ)ಯೊಬ್ಬರು ನನ್ನ ಬ್ಲಾಗಿನ ಬರಹಗಳನ್ನು ಓದಿ 'ಫ್ಯಾನ್' ಆಗಿ ಅಭಿನಂದನೆ ಹೇಳಲು ಫೋನ್ ಮಾಡಿದ್ದರು. ಅದೇ ಹೊತ್ತಿಗೆ ನನ್ನ ಫೋನು, ಇಂಟರ್ನೆಟ್ಟು ಎಲ್ಲ ಕೆಟ್ಟು ಕೆರ ಹಿಡಿದಿದ್ದರಿಂದ 'ಈ ಬಿಎಸ್ಸೆನ್ನೆಲ್ಲಿನವರು ಎದುರಿಗೆ ಸಿಕ್ಕರೆ ಹಿಡ್ಕಂಡು ಸಮಾ ನಾಲ್ಕು ತದುಕಬೇಕು'ಎಂಬಷ್ಟು ಜಮದಗ್ನಿಯ ಅಪರಾವತಾರ ತಾಳಿದ್ದ ನಾನು ಅವರ ಕರೆಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗಲಿಲ್ಲ. ಇದರಿಂದ ಆರಂಭದಲ್ಲಿ 'ಖೈತಾನ್ 'ಫ್ಯಾನ್' ವೇಗದಲ್ಲಿ ಹೊರಡುತ್ತಿದ್ದ ಅವರ ಧ್ವನಿ ಕಡೆಕಡೆಗೆ 1947 ಮಾಡೆಲ್ ಉಷಾ ಫ್ಯಾನ್ ವೇಗಕ್ಕೆ ಬಂದು ಬೇಸರದಲ್ಲೇ ಫೋನ್ ಕುಕ್ಕಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾನು 'ಸಾರಿ' ಕೇಳಿದೆನಾದರೂ ಅವರು 'ಓಕೆ ರೀ..' ಎಂದ ಪರಿ ನನಗೆ ಸರಿಬರದಿದ್ದರಿಂದ ಬ್ಲಾಗಂಗಳದಲ್ಲೇ ಮತ್ತೊಮ್ಮೆ ಅವರಿಗೆ 'ಸಾರಿ..' ಎನ್ನುತ್ತಾ ಬಹುದಿನಗಳ ನಂತರ ಹೊಸ ಬರಹವೊಂದನ್ನು ಹಾಕಿದ್ದೇನೆ ಓದಬರುವವರಿಗೆಲ್ಲ ಸ್ವಾಗತ


ಬರಿದಾದ ಮನೆಬೆಳಕೆ ನೀನೆಂದು ಬರುವೆ...?

ನಾಕಲೋಕದ ನಕ್ಷತ್ರವೇ,

ಮೊನ್ನೆ ಸಂಭ್ರಮದ ರಕ್ಷಾಬಂಧನ. ಗೆಳೆಯರೆಲ್ಲ ಅಕ್ಕತಂಗಿಯರಿಂದ ರಾಖಿ ಕಟ್ಟಿಸಕೊಂಡು ಸಂಭ್ರಮಿಸುತ್ತಿದ್ದರು. ಆ ಕ್ಷಣಕ್ಕೆ ನೆನಪಾದವಳು ನೀನು. ಎಲ್ಲ ಸುಸೂತ್ರವಾಗಿದ್ದಿದ್ದರೆ ನಾನೂ ನಿನ್ನ ಕೈಲಿ ರಾಖಿ ಕಟ್ಟಿಸಿಕೊಂಡು 'ಅಣ್ಣ'ನೆಂಬ ಹೆಮ್ಮೆಯಲ್ಲಿ ಬೀಗುತ್ತಿರುತ್ತಿದ್ದೆ. ಆದರೆ ದೈವಚಿತ್ತವೇ ಹಾಗಿತ್ತೇನೋ? ಉಸಿರು ಹಸಿರಾಗಿ ಚಿಗುರುವ ಮುನ್ನವೇ ನೀನು ಕಾಣದೂರಿಗೆ ಹೊರಟುಹೋದೆ. ಓರಗೆಯ ತಂಗಿಯರು, ದೊಡ್ಡಮ್ಮನ ಮಕ್ಕಳು ರಾಖಿ ಕಟ್ಟಿ ಶುಭ ಹಾರೈಸಿದರಾದರೂ ಬೆನ್ನಿಗೆ ಹುಟ್ಟಿದ ತಂಗಿಯಿಂದ ರಾಖಿ ಕಟ್ಟಿಸಿಕೊಂಡು ಗಿಫ್ಟಿಗಾಗಿ ನೀನು ಗೋಳುಹುಯ್ದುಕೊಳ್ಳುವುದನ್ನು ಕಂಡು ಒಳಗೊಳಗೇ ಖುಷಿ ಪಡುವ, ದುಡ್ಡೋ ಗಿಫ್ಟೋ ಕೊಟ್ಟಾಗ ನೀನು ಕುಣಿದಾಡುವ ಕ್ಷಣದ ಸಂತೋಷವೇ ಬೇರೆ. ಆ ವಿಷಯದಲ್ಲಿ ನಾನು ಪರ್ಮನೆಂಟ್ ದುರದೃಷ್ಟವಂತ!
ನಾವು ಗಂಡು ಹುಡುಗರು 'ತಮ್ಮ' ಎನಿಸಿಕೊಳ್ಳುವುದಕ್ಕಿಂತ 'ಅಣ್ಣ' ಎನಿಸಿಕೊಳ್ಳುವುದಕ್ಕೇ ಹೆಚ್ಚು ಇಷ್ಟಪಡುತ್ತೇವೆ. ಕಾರಣ ಇಷ್ಟೆ: ತಮ್ಮನಾದರೆ, ನೀವು ಮೊದಲೇ ಫೀಲ್ಡಿಗೆ ಕಾಲಿಟ್ಟ ಅಕ್ಕಂದಿರು ನಮ್ಮ ರೆಕ್ಕೆಪುಕ್ಕಗಳನ್ನೆಲ್ಲ ಕತ್ತರಿಸಿ ನಮ್ಮ ಜುಟ್ಟು ಕೈಲಿಟ್ಟುಕೊಂಡು ಆಟ ಆಡಿಸಿಬಿಡುತ್ತೀರಿ! ಹಾಗಾಗಿ ನಮಗೆ ಅಣ್ಣನಾಗುವುದೇ ಹೆಚ್ಚು ಇಷ್ಟ. ತಪ್ಪಿಹೋದದ್ದು ಅಣ್ಣನೆಂಬ ಚಿಕ್ಕ ಪದವಿಯಾದರೂ ಅದರಿಂದ ಎಷ್ಟೆಲ್ಲ ಸಣ್ಣಸಣ್ಣ ಸಂತೋಷಗಳು ಇಲ್ಲವಾದವು ಎಂಬುದನ್ನು ನೆನೆಸಿಕೊಂಡರೆ ಇವತ್ತಿಗೂ ದುಃಖವಾಗುತ್ತದೆ. ನಿನ್ನನ್ನು ಶಾಲೆಗೆ ಕರೆದೊಯ್ಯುವುದರಿಂದ ಹಿಡಿದು ಜಾತ್ರೆಯಲ್ಲಿ ಬಳೆ, ರಿಬ್ಬನ್ನು ಕೊಡಿಸುವ, ಡ್ರೆಸ್ ಕೊಡಿಸುವ ಕೊನೆಗೆ ಒಬ್ಬ ವರ ಮಹಾಶಯನಿಗೆ ನಿನ್ನನ್ನು ಒಪ್ಪಿಸಿ ಭಾವನೆನ್ನಿಸಿಕೊಳ್ಳುವ ವರೆಗೆ ಯಾವ ಸಂತೋಷವನ್ನೂ ಈ ಜನ್ಮದಲ್ಲಿ ಅನುಭವಿಸಲಾಗದವನು ನಾನು.

ಒಮ್ಮೊಮ್ಮೆ ನನ್ನ ಹುಡುಗಾಟ ಮಿತಿಮೀರಿದಾಗಲೋ, ಅವರಿವರ ಹೆಣ್ಣುಮಕ್ಕಳ ವಿಷಯ ಬಂದಾಗಲೋ ಅಮ್ಮ 'ಅವಳಿದ್ದಿದ್ದರೆ ಇಷ್ಟರಲ್ಲೇ ಒಂದು ಗುಂಡು ಹುಡುಕಲು ಶುರುಮಾಡಬೇಕಿತ್ತು ಆಗ ನಿನಗೆ ಸ್ವಲ್ಪ ಜವಾಬ್ದಾರಿ ಬರುತ್ತಿತ್ತು' ಎನ್ನುತ್ತಿರುತ್ತಾಳೆ. ಆಗೆಲ್ಲ ನಾನು 'ಈಗ ಮೀಸೆಗಿಂತ ಜಡೆಗೇ ಜಾಸ್ತಿ ಡಿಮ್ಯಾಂಡ್ ಇರುವಾಗ 'ವರ'ಗಳಿಗೇನೂ ಬರ ಇರಲಿಲ್ಲ. ಸರಿಯಾದವನನ್ನೇ ಹುಡುಕಿ ಜೋಡಿ ಮಾಡುತ್ತಿದ್ದೆ' ಎನ್ನುತ್ತಿರುತ್ತೇನೆ. ಕೆಲವು ಗಂಟೆಗಳ ಇಷ್ಟು ಸಂತೋಷವನ್ನು ತಂದವಳು ನೀನು, ಇನ್ನು ಇಡೀ ಬದುಕಿನುದ್ದಕ್ಕೂ ಇದ್ದಿದ್ದರೆ ಹುಟ್ಟಿದ ಮನೆಗೂ ಕೊಟ್ಟ ಮನೆಗೂ ನಿಜವಾದ ಮನೆಬೆಳಕೇ ಆಗಿರುತ್ತಿದ್ದೆಯೇನೋ!? ಆ ಭಾಗ್ಯ ನಮಗಿಲ್ಲ ಅಷ್ಟೆ. ನಮ್ಮೊಡನೆ ಇಲ್ಲದಿದ್ದರೂ ಎಲ್ಲೋ ಒಂದೆಡೆ ಮತ್ತೆ ಉಸಿರೊಡೆದು ಹಸಿರಾಗಿ ಮನೆಮಂದಿಗೆಲ್ಲ ತಂಪು ನೀಡುತ್ತಿದ್ದೀಯ ಎಂಬ ನಂಬಿಕೆ ನನ್ನದು. ನೀನೆಲ್ಲೇ ಇದ್ದರೂ ನಿನ್ನ ಉಸಿರಿನಿಂದ ಒಡಮೂಡಿದ ಆ ಜೀವ ತಣ್ಣಗಿರಲಿ.

ಇಂತಿ,
ನಿನ್ನ ಅಣ್ಣ