ಶ್ವಾನ ಸಂರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ಎಂದಿನಂತೆ ತನ್ನ ಫೀಲ್ಡ್ ವರ್ಕ್ ಮುಗಿಸಿ ಸಂಘದ ಕಚೇರಿಗೆ ವಾಪಸಾಗುತ್ತಿದ್ದ. ಸಂಘಕ್ಕೆ ಅಧ್ಯಕ್ಷನಾದಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸದಲ್ಲೇ ಭಾರೀ ಯಶಸ್ಸು ಸಿಕ್ಕಿದ್ದ ಕಳೆ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೀದಿ ನಾಯಿಗಳನ್ನು ಉಳಿಸಲು ತಾನು ಕೈಗೆತ್ತಿಕೊಂಡ ಚಳುವಳಿ ತಾರಕಕ್ಕೇರಿದ್ದು ಆತನಿಗೆ ವಿಪರೀತ ಸಂತಸ ತಂದಿತ್ತು. ನಗರದಲ್ಲಿ ಬೀದಿ ನಾಯಿಗಳ ಪರವಾಗಿ ಪೋಸ್ಟರ್ , ಕರಪತ್ರಗಳು ಯಥೇಚ್ಚವಾಗಿ ರಾರಾಜಿಸುತ್ತಿದ್ದವು.
ನಾಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು.
ಆವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ.
ಅದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು.
ಏನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು.
ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು.
ನಾಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.!
ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು.
5 ಕಾಮೆಂಟ್‌ಗಳು:
ರಾಘವೇಂದ್ರ,
ಕೊನೆಗೂ ಒಂದು ಲೇಖನ ಬಂತಲ್ಲ...ಅದೂ ಬೀದಿನಾಯಿಗಳ ಮೇಲೆ....ವಾಸ್ತವವಾಗಿ ಹೀಗೆ ಆಗುವುದನ್ನು ಲೇಖನ ತೋರಿಸುತ್ತದೆ...ಮತ್ತದೇ ಹಾಸ್ಯದಾಟಿಯಲ್ಲಿ....ಎಲ್ಲಾ ನಾಟಕದ ಪ್ರಭಾವವೇ..ಗುರು..!!
ರಾಘವೇಂದ್ರರವರೆ...
ಬೂಟಾಟಿಕೆಯನ್ನು ಚೆನ್ನಾಗಿ ಬಿಂಬಿಸಿದ್ದೀರಿ...
ನೀವೆನ್ನುವದು ಕಟು ವಾಸ್ತವ..
ನಿಮ್ಮ ಲೇಖನ ಬಹಳ ತಡವಾಗಿ ಬರುತ್ತಿದೆ...
ಬೇಗ ಬೇಗ ಪೋಸ್ಟ್ ಹಾಕುವಿರೆಂದು ನಂಬಲೇ..
ಧನ್ಯವಾದಗಳು..
@ ಶಿವು, ಇಷ್ಟು ದಿನ ಬಿಡುವಾಗಿರಲಿಲ್ಲ. ಮೊನ್ನೆ ಶತಾಯಗತಾಯ ಬ್ಲಾಗ್ ಅಪ್ ಡೇಟ್ ಮಾಡಲೇಬೇಕೆಂದು ಕೂತು ಬರೆದ ಲೇಖನ ಇದು. ಬಂದು ಓದಿದ್ದಕ್ಕೆ ಥ್ಯಾಂಕ್ಸ್.
ನಾಟಕ ಪ್ರಭಾವವೇನೂ ಅಲ್ಲ....
@ ಪ್ರಕಾಶ್ ಹೆಗಡೆ
ಹೌದು. ಸ್ವಲ್ಪ ಬೇರೆ ಕೆಲಸಗಳ ಒತ್ತಡದಿಂದ ಬ್ಲಾಗಿಗೆ ಬರಲು ಆಗುತ್ತಿಲ್ಲ. ಇನ್ನು ರೆಗ್ಯುಲರ್ ಆಗಿ ಬರಿತೀನಿ. ಪ್ರಾಮಿಸ್...!!! ಹೀಗೆ ಬರ್ತಾ ಇರವು ಮತೆ.
- ರಾಘವೇಂದ್ರ ಕೆಸವಿನಮನೆ.
ಇಂಥವರೂ ತುಂಬಾ ಜನ ಇರ್ತಾರೆ. ತುಂಬಾ ಚೆನ್ನಾಗಿ ಬರೆದಿರಿ. ಸದಾ ಹೀಗೇ ಇಂಚರದಲ್ಲಿ ಅಕ್ಷರ ಕೃಷಿ ಬೆಳೆಯಲಿ.
-ಧರಿತ್ರಿ
well write up dude...
ಕಾಮೆಂಟ್ ಪೋಸ್ಟ್ ಮಾಡಿ