ಮಂಗಳವಾರ, ಡಿಸೆಂಬರ್ 9, 2008

ಕ್ವಾಟ್ಲೆ ಕೊತ್ವಾಲ್ ಎಂಬ ಹೊಸ ರಾಗ

ಸುಮ್ಮನೆ ಹರಟೆ ಕೊಚ್ಚುತ್ತ ಕುಳಿತಾಗ ಹೊಕ್ಕ ಹುಳ ಈ ಕ್ವಾಟ್ಲೆ ಕೊತ್ವಾಲ್'. ಇದು ಕೇವಲ ಕ್ವಾಟ್ಲೆ(ತಮಾಷೆ)ಗಾಗಿ. ಇದರ ಹಿಂದೆ ಯಾರನ್ನೂ ಚುಚ್ಚುವ, ಅಪಹಾಸ್ಯ ಮಾಡುವ ಉದ್ದೇಶವಿಲ್ಲ.
ನಿಮಗೆ ಇಷ್ಟವಾಯಿತಾದರೆ ಕೊತ್ವಾಲ್ ಆಗಾಗ ಕಾಣಿಸಿಕೊಳ್ಳಲಿದ್ದಾನೆ.


ಪಾತ್ರ ಪರಿಚಯ: ಕೊತ್ವಾಲ್- ಒಬ್ಬ ಸುದ್ದಿ ಪ್ರಿಯ. ತನ್ನ ಶಿಷ್ಯನ ಮೂಲಕ ಊರ, ಪರಊರ ಸುದ್ದಿ ತಿಳಿಯುವುದು ಇವನ ಪ್ರಿಯವಾದ ಹವ್ಯಾಸ.
ಕಿಳ್ಳೇಕ್ಯಾತ:- ಕೊತ್ವಾಲನ ಶಿಷ್ಯ. ವಿಷಯ ಸಂಗ್ರಹಣೆಯಲ್ಲಿ ನಿಪುಣ.

ಯಾವತ್ತಿನಂತೆ ತನ್ನ ಆಸನದಲ್ಲಿ ವಿರಾಜಮಾನನಾದ ಕ್ವಾಟ್ಲೆ ಕ್ವತ್ವಾಲ್ ತನ್ನ ಶಿಷ್ಯ ಕಿಳ್ಳೇಕ್ಯಾತನ ಪ್ರತೀಕ್ಷೆಯಲ್ಲಿ ತೊಡಗಿದ. ಯಾವತ್ತೂ ತಾನು ಆಸೀನನಾಗುತ್ತಿದ್ದಂತೆ ಎದುರಿಗೆ ವಕ್ಕರಿಸುತ್ತಿದ್ದ ಶಿಷ್ಯೋತ್ತಮ ಇಂದು ಕಾಣದಿದ್ದಾಗ 'ಬಡ್ಡೇತದು ಊರ ಸುದ್ದಿ ತಿಳ್ಕಂಡು ಬಾರ್ಲಾ ಅಂತ ಕಳಿಸಿದ್ದರೆ ಎಲ್ಲಿ ಹಕ್ಕಲು ಪಟ್ಟಾಂಗ ಮಾಡುತ್ತ ಕುಳೀತಿದೆಯೋ' ಎಂದು ಗೊಣಗಿಕೊಂಡ.!
ಅಷ್ಟರಲ್ಲೇ "ಬಂದು ಬಾಳಾ ಹೊತ್ತಾತಾ ಗುರುಗ್ಳೇ...?" ಎನ್ನುತ್ತ ಕಿಳ್ಳೆಕ್ಯಾತ ಕೊತ್ವಾಲನ ಮುಂದೆ ಪ್ರತ್ಯಕ್ಷನಾದ.

ಎಲ್ಲಾ ಫಾರ್ಮಾಲಿಟೀಸ್ ಬದಿಗಿಟ್ಟು ಕೊತ್ವಾಲ ಕಿಳ್ಳೇಕ್ಯಾತನ ಬೀಟ್ ಡೈರಿಯ ಪರಿಶೀಲನೆಗೆ ಮುಂದಾದ.
"ಏನ್ಲಾ, ಪದ್ಮನಾಭ ಪುರದ ಪವರ್ ಹೌಸ್ ಕಡಿಗೆ ಹೋಗಿ "ದೊಡ್ಡವ್ರು" ಸೆಂದಾಕ್ಕವ್ರಾ ವಿಚಾರಿಸ್ಕಂಡ್ ಬಾ ಅಂದಿದ್ದೆ. ಹೋಗಿದ್ದೇನ್ಲಾ?"

ಕಿ.ಕ್ಯಾ. ತಕ್ಷಣವೇ ತನ್ನ ಬೀಟ್ ಪ್ರವರ ಒಪ್ಪಿಸತೊಡಗಿದ: "ಹೂಂ ಗುರುಗ್ಳೇ ಹೋಗಿದ್ದೆ. ಆದ್ರೆ ದೊಡ್ಡವ್ರು ಮನ್ಯಾಗೆ ಇರ್ನಿಲ್ಲ. ಅದೆ ಮೊನ್ನೆ ನಡೆದ ರಾಲಿನಾಗೆ ತುತ್ತೂರಿ ಊದಾವ ಅಂತ ಇದ್ದಬದ್ದ ಉಸರೆಲ್ಲಾ ಹಾಕಿ ಪುಸುಗುಟ್ಟಿದ್ರೂ ತುತ್ತೂರಿ ಸ್ವರ ಹೊರ್ಟಿರ್ಲಿಲ್ವಲ್ಲ , ಅದ್ಕೆ ಶಾನೆ ಬೇಜಾರ್ ಮಾಡ್ಕಂಡು ಯಾವ್ದಾರೂ ರಾಹು ಕೇತು ವಕ್ಕರಿಸಿಕೊಂಡವ್ರಾ? ಉಪ ಚುನಾವಣೇ ಬೇರೆ ಬಂತು. ಕೇಳ್ಕಂಬತ್ತೀನಿ ಅಂತ ದೇವರ ನಾಡು(God's Own country) ಕಡೆ ಹೋಗವ್ರಂತೆ. ವಾಪಸ್ ಬರಾದು ಮುಂದಿನ್ ಅಮಾಸೆ ಕಳೆದ ಮ್ಯಾಕಂತೆ.!"

"ಹೌದಾ? ನಮ್ ಸುಬ್ರಹ್ಮಣ್ಯಸ್ವಾಮಿಗಳಾದ್ರೂ ಸಿಕ್ಕಿದ್ರಾ?"
ಕಿ.ಕ್ಯಾ.:"ಸಿಕ್ಕಿದ್ರು. ಆದ್ರೆ ಅವರೂ ಡಲ್ಲಾಗಿದ್ರು. ಮಾತಾಡ ಮೂಡ್ನಾಗೆ ಇರ್ನಿಲ್ಲ.!"
"ಅದ್ಯಾಕ್ಲಾ? ಮೊನ್ನೆ ಗಂಟ ಗುಂಡ್ಕಲ್ ಇದ್ದಂಗೆ ಇದ್ರಲ್ಲ! ಈಗೇನಾತ್ಲಾ?"
" ಯಾವ್ದೊ ಭಾಸಣದಾಗೆ 'ನಾನು ಇನ್ಮುಂದೆ ಪಂಚೆ ಉಟ್ಕಂಡೇ ಓಡಾಡ್ತೀನಿ' ಅಂತ ಹೇಳಿದ್ದಕ್ಕೆ ಯಾರೋ ಕರೆಂಟ್ ಕೊಟ್ಟಂಗೆ ಕಮೆಂಟ್ ಮಾಡವ್ರಂತಲ್ಲಾ!?"
"ಯಾರ್ಲಾ ಅದು ಅಂಥಾ ಗಂಡು!?"
"ಅವರಾ ಹೆಸ್ರು "ಪುಟ್ಟ"ದಾಗಿದ್ರೂ ಕ್ಯಾರೆಕ್ಟರು ಫವರ್ಫುಲ್ ಆಗಿರೋ "ಅಣ್ಣಯ್ಯ" ಒಬ್ರು ಅವ್ರಂತಲ್ಲ! ಅವರೇ ಈ ಕ(ರೆ)ಮೆಂಟ್ ಕೊಟ್ಟೋರು. ಅವರು 'ಸ್ವಾಮಿಯವರು ನಿಜವಾದ ಮಣ್ಣಿನ ಮೊಮ್ಮಗನೇ ಆಗಿದ್ರೆ ಚಡ್ಡಿ ಹಾಕ್ಕಂಡು ತಿರುಗಾಡ್ಲಿ. ನಾನು ಒಪ್ಕತೀನಿ......' ಅಂತೆಲ್ಲಾ ಹೇಳಿದ್ರಂತೆ. ಅದ್ಕೆ ಇವ್ರು ವರ್ಸಾನುದಿನ ತೊಳೆಯದ ಪಂಚೆ ಥರ ಮುಖ ಮಾಡ್ಕಂಡು ಕುಂತ್ಕಂಡಿದ್ರು!"

"ಹೋಗ್ಲಿ. ನಮ್ಮ ಚಿಕ್ಕತಮ್ಮಯ್ಯ ಆದ್ರೂ ಸಿಕ್ಕುದ್ರಾ?"
"ಇಲ್ಲ.! ಅಣ್ಣ ಸ್ವಾಮಿ ಆ ಪರಿ ಬೇಜಾರು ಮಾಡ್ಕಂಡಿರಾದು ನೋಡಿ 'ಹೋಗ್ಲಿ ಅತ್ಲಾಗೆ ಒಂದು ಪಟ್ಟಾಪಟ್ಟಿ ಚಡ್ಡೀನಾರ ತಂದುಕೊಡಾವ ಅಂತ ಜವಳಿ ಸಾಪ್ ಕಡೆ ಹೋಗಿದ್ರಂತೆ.! ಅಣ್ಣದೇವರ ಸೈಜಿನ್ ಚಡ್ಡಿ ಎಲ್ಲೂ ಸಿಗಾಕಿಲ್ಲ ಅಂತಂದಾಗ ಯಾವದಾರ ಸಾಮಿಯಾನ ಕಂಪ್ನಿಗೆ ಹೋಗಿ ಒಂದಷ್ಟು ಬಟ್ಟೆ ತತ್ತೀನಿ. ಫ್ರೀ ಸೈಜಿಂದು ಹೊಲಿಸಿದ್ರಾತು ಅಂತ ಸಾಮಿಯಾನ ಫ್ಯಾಕ್ಟರಿ ಹುಡಿಕ್ಕಂಡು ಹೋಗವ್ರಂತೆ!"
"ಅಯ್ಯೋ ಪಾಪ..! ಇತ್ತಾಗೆ ನಮ್ಮ ಹೈಕೋರ್ಟ್ ಎದುರಿಂದ ಏನಾರ ಸುದ್ದಿ ಐತಾ?"
"ಇಸೇಸ ಸುದ್ದಿ ಏನಿಲ್ಲ. ಈ ತಿಂಗ್ಳ 13ಕ್ಕೆ ನಮ್ ಕಲಾಂ ಸಾರು ಏನೋ 'ಕ್ಲಾಸ್ ತಗತ್ತೀನಿ ರೆಡಿಯಾಗಿರಿ" ಅಂದವ್ರಂತಲ್ಲ. ಅದ್ಕೆ ತಯಾರಾಗೋದ್ರಾಗೆ ಬಿಜಿಯಾಗವ್ರೆ ಎಲ್ಲ.!"

"ಬೆಂದಕಾಳೂರಿಂದು ಈ ಕಥೆನಾ?" ಇನ್ನು ನಮ್ ಮಹಿಷಪುರ ಕತೆ ಏನಪ?"
"ಅಯ್ಯೋ ಇಲ್ಲಿದೇನು ಬುಡಿ ಸಿವಾ! ಉಸ್ತುವಾರಿ ನೋಡೋ 'ಅಕ್ಕೋರು' ದಸರಾನ 'ಶೋಭಾ'ಯಮಾನವಾಗಿ ಮಾಡಿ ಮುಗ್ಸುದ್ದು ನೋಡಿ 'ಅಪ್ಪೋರು' ದಿಲ್ ಕುಸ್ ಆಗವ್ರಂತೆ. ಅದ್ನ ಕಂಡು ಖುಸಿಯಾದ ಅಕ್ಕೋರು 'ಮುಂದಿನ ದಸರಾಗೆ ಈಗ್ಲಿಂದೆ ತಯಾರಿ ಸುರುಹಚ್ಕಳಿ' ಅಂತ ಅಧಿಕಾರಿಗುಳೀಗೆ ಏಳಿ ತಮ್ಮ ಗೂಟದ ಕಾರು ಹತ್ತಿ ಹೋದವ್ರು ಇನ್ನೂ ಇತ್ತಾ ಕಡೆ ಮುಖ ಮಾಡಿಲ್ವಂತೆ. ಇತ್ತಾಗೆ ರಂಗಾಯಣದಾಗೆ ಬಹುರೂಪಿ ನಾಟಕೋತ್ಸವ ಬಂತಲ್ಲ, ಅದ್ಕೆ ನಮ್ಮ ಖ್ಯಾ(ತೆ)ತ ಇಮರ್ಸಕರೆಲ್ಲ ಹೊಸ ಪೆನ್ನು ತಗಂಡು, ಜುಬ್ಬ ಪೈಜಾಮ ತೊಳ್ಕೊಂಡು, ಫ್ರೆಂಚ್ ಗಡ್ಡ ಟ್ರಿಮ್ ಮಾಡ್ಕಂಡು ತಯಾರಾಗ್ತವ್ರೆ! ಈ ಸರ್ತಿ 'ಬಹುರೂಪಿ'ಲಿ ಏನ್ ಕುರೂಪ ಹುಡುಕ್ಲಿ ಅಂತ ಕನ್ನಡ್ಕ ಒರೆಸ್ಕೊಂಡು ಕುಂತವ್ರೆ!"

"ಹೌದಾ. ಸರಿಕಣ್ ಬುಡು. ಬಹುರೂಪಿ ಟೇಮಿನಾಗೆ ಇತ್ಲಾಗೆ ಚೂರು ಗ್ಯಾನ ಮಡುಗು. ಬರೀ ಬೆಂದಕಾಳೂರ್ನಾಗೇ ಕಾಲ ಕಳಿತ ಕೂರ್ಬೇಡ" ಎಂದ ಕೊತ್ವಾಲ ಹೊರಡಲನುವಾದ.
ಅದನ್ನು ಕಂಡ ಕಿ.ಕ್ಯಾ. ಮಾಮೂಲಿಗಾಗಿ ಕೈಯೊಡ್ಡಿ ಹಲ್ಲುಗಿಂಜಿದ. "ಥೂ ಬಡ್ಡೇತದೆ. ಈ ಚಿಲ್ರೆ ಬುದ್ಧಿ ಬುಡಾಕಿಲ್ವಲ ನೀನು" ಎಂದು ಹತ್ತು ರೂನ ನೋಟನ್ನು ನೀಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾದ.

5 ಕಾಮೆಂಟ್‌ಗಳು:

Ittigecement ಹೇಳಿದರು...

ಭೋ... ಚೆನ್ನಾಗಿದೆ ಸೋಮಿ..!!.

ಟಿವಿ 9 ರವರು..ಹೀಡ್ಕಂಡು ಹೋದಾರು... ಒಸಿ ಉಸಾರು...!!
(ಹೇಳಿದ್ದು..ಕೇಳಿದ್ದು ಕಾರ್ಯಕ್ರಮಕ್ಕೆ)

shivu.k ಹೇಳಿದರು...

ರಾಘವೇಂದ್ರ ಸೋಮಿಗಳೇ,

ಏನ್ರಿ ಇದು ಬಲ್ಮಜ ಬರ್ತದಲ್ಲಪ್ಪೋ... ಟಿ.ವಿ.9 ಜೊತೆಗೆ ಲಂಕೇಶ್ ಪತ್ರಿಕೆ ಕಟ್ಟೆ ಪುರಾಣಕ್ಕೆ ಎತ್ತಾಕಿಕೊಂಡು ಹೋದಾರು ಹುಷಾರು ಧಣಿಗೋಳೇ....

Ashok Uchangi ಹೇಳಿದರು...

ಪ್ರಿಯ ರಾಘವೇಂದ್ರ.
ಧನ್ಯವಾದಗಳು.
ಇಂಚರಕ್ಕೆ ಅನೇಕ ಸಲ ಬಂದಿದ್ದೆ.ಆದರೆ ಪ್ರತಿಕ್ರಿಯೆ ನೀಡಲು ಆಗಿರಲಿಲ್ಲ.ಸ್ವಲ್ಪ ಮಲೆನಾಡಿನ ಕಷ್ಟಸುಖಗಳನ್ನೂ ಹೇಳಿ,ಕೇಳಲು ಚೆನ್ನಾಗಿರುತ್ತೆ.
ಮೈಸೂರಿನಲ್ಲಿ ಎಲ್ಲಿದ್ದೀರಿ.ಏನು ಮಾಡುತ್ತಿದ್ದೀರಿ?
ಅಶೋಕ ಉಚ್ಚಂಗಿ
ಮೈಸೂರು.
http://mysoremallige01.blogspot.com/

ರಾಘವೇಂದ್ರ ಕೆಸವಿನಮನೆ. ಹೇಳಿದರು...

@ ಸಿಮೆಂಟು ಮರಳಿನ ಮಧ್ಯೆ and ಶಿವು ಸರ್,

ದಮ್ಮಯ್ಯ ಸ್ವಾಮಿ.!! ಅವೆರಡರ ಸಹವಾಸ ಮಾತ್ರ ಬ್ಯಾಡವೇ ಬ್ಯಾಡ.!!!!!
-ರಾಘವೇಂದ್ರ ಕೆಸವಿನಮನೆ.

shivu.k ಹೇಳಿದರು...

ರಾಘವೇಂದ್ರ,
ನಿಮ್ಮ ಹೆಸರನ್ನು ಅವೆರಡಕ್ಕೆ ಕೊಟ್ಟಾಗಿದೆಯಲ್ಲ ! ನಿಮಗೆ ಒಂದೆರಡು ದಿನಗಳಲ್ಲಿ ಇಂಟರ್ ವ್ಯೂ ಬರಬಹುದು ಬೆಸ್ಟ್ ಆಫ್ ಲಕ್ !!