ಬುಧವಾರ ೨೫ ಮಾರ್ಚ್ ೨೦೦೯
ಸುಶಿಕ್ಷಿತನ ಸಣ್ಣತನ
ಅಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು.
ಇದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ.
ಬಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು.
ವಿದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು?
ಗುರುವಾರ ೧೨ ಮಾರ್ಚ್ ೨೦೦೯
ಕಥೆಯಲ್ಲದ ಕಥೆ
ನಾಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು.
ಆವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ.
ಅದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು.
ಏನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು.
ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು.
ನಾಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.!
ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು.
ಮಂಗಳವಾರ ೨೦ ಜನವರೀ ೨೦೦೯
ಮಾಗಿ ಚಳಿಗೆ ಮೈಯೊಡ್ಡಿ
ಮಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.
ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.
ಮಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು. ಶನಿವಾರ ೩ ಜನವರೀ ೨೦೦೯
"ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು
ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು.
ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ!
ಸಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು
ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು.
ಆಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು.
ನಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.
ಚಿತ್ರ ಕೃಪೆ: ಇಂಟರ್ನೆಟ್
ಸೋಮವಾರ ೧೫ ಡಿಸೆಂಬರ್ ೨೦೦೮
ಹೀಗೊಂದು ಕಥಾ ಕಾಲಕ್ಷೇಪ
ಅದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ
ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ.
ಆ ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು.
ಈ ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ.
ಅಂದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು.
ಅಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು.
ಮರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.
ಫೋಟೊ ಕೃಪೆ: ಇಂಟರ್ನೆಟ್
ಮಂಗಳವಾರ ೯ ಡಿಸೆಂಬರ್ ೨೦೦೮
ಕ್ವಾಟ್ಲೆ ಕೊತ್ವಾಲ್ ಎಂಬ ಹೊಸ ರಾಗ
ನಿಮಗೆ ಇಷ್ಟವಾಯಿತಾದರೆ ಕೊತ್ವಾಲ್ ಆಗಾಗ ಕಾಣಿಸಿಕೊಳ್ಳಲಿದ್ದಾನೆ.
ಪಾತ್ರ ಪರಿಚಯ: ಕೊತ್ವಾಲ್- ಒಬ್ಬ ಸುದ್ದಿ ಪ್ರಿಯ. ತನ್ನ ಶಿಷ್ಯನ ಮೂಲಕ ಊರ, ಪರಊರ ಸುದ್ದಿ ತಿಳಿಯುವುದು ಇವನ ಪ್ರಿಯವಾದ ಹವ್ಯಾಸ.
ಕಿಳ್ಳೇಕ್ಯಾತ:- ಕೊತ್ವಾಲನ ಶಿಷ್ಯ. ವಿಷಯ ಸಂಗ್ರಹಣೆಯಲ್ಲಿ ನಿಪುಣ.
ಯಾವತ್ತಿನಂತೆ ತನ್ನ ಆಸನದಲ್ಲಿ ವಿರಾಜಮಾನನಾದ ಕ್ವಾಟ್ಲೆ ಕ್ವತ್ವಾಲ್ ತನ್ನ ಶಿಷ್ಯ ಕಿಳ್ಳೇಕ್ಯಾತನ ಪ್ರತೀಕ್ಷೆಯಲ್ಲಿ ತೊಡಗಿದ. ಯಾವತ್ತೂ ತಾನು ಆಸೀನನಾಗುತ್ತಿದ್ದಂತೆ ಎದುರಿಗೆ ವಕ್ಕರಿಸುತ್ತಿದ್ದ ಶಿಷ್ಯೋತ್ತಮ ಇಂದು ಕಾಣದಿದ್ದಾಗ 'ಬಡ್ಡೇತದು ಊರ ಸುದ್ದಿ ತಿಳ್ಕಂಡು ಬಾರ್ಲಾ ಅಂತ ಕಳಿಸಿದ್ದರೆ ಎಲ್ಲಿ ಹಕ್ಕಲು ಪಟ್ಟಾಂಗ ಮಾಡುತ್ತ ಕುಳೀತಿದೆಯೋ' ಎಂದು ಗೊಣಗಿಕೊಂಡ.!
ಅಷ್ಟರಲ್ಲೇ "ಬಂದು ಬಾಳಾ ಹೊತ್ತಾತಾ ಗುರುಗ್ಳೇ...?" ಎನ್ನುತ್ತ ಕಿಳ್ಳೆಕ್ಯಾತ ಕೊತ್ವಾಲನ ಮುಂದೆ ಪ್ರತ್ಯಕ್ಷನಾದ.
ಎಲ್ಲಾ ಫಾರ್ಮಾಲಿಟೀಸ್ ಬದಿಗಿಟ್ಟು ಕೊತ್ವಾಲ ಕಿಳ್ಳೇಕ್ಯಾತನ ಬೀಟ್ ಡೈರಿಯ ಪರಿಶೀಲನೆಗೆ ಮುಂದಾದ.
"ಏನ್ಲಾ, ಪದ್ಮನಾಭ ಪುರದ ಪವರ್ ಹೌಸ್ ಕಡಿಗೆ ಹೋಗಿ "ದೊಡ್ಡವ್ರು" ಸೆಂದಾಕ್ಕವ್ರಾ ವಿಚಾರಿಸ್ಕಂಡ್ ಬಾ ಅಂದಿದ್ದೆ. ಹೋಗಿದ್ದೇನ್ಲಾ?"
ಕಿ.ಕ್ಯಾ. ತಕ್ಷಣವೇ ತನ್ನ ಬೀಟ್ ಪ್ರವರ ಒಪ್ಪಿಸತೊಡಗಿದ: "ಹೂಂ ಗುರುಗ್ಳೇ ಹೋಗಿದ್ದೆ. ಆದ್ರೆ ದೊಡ್ಡವ್ರು ಮನ್ಯಾಗೆ ಇರ್ನಿಲ್ಲ. ಅದೆ ಮೊನ್ನೆ ನಡೆದ ರಾಲಿನಾಗೆ ತುತ್ತೂರಿ ಊದಾವ ಅಂತ ಇದ್ದಬದ್ದ ಉಸರೆಲ್ಲಾ ಹಾಕಿ ಪುಸುಗುಟ್ಟಿದ್ರೂ ತುತ್ತೂರಿ ಸ್ವರ ಹೊರ್ಟಿರ್ಲಿಲ್ವಲ್ಲ , ಅದ್ಕೆ ಶಾನೆ ಬೇಜಾರ್ ಮಾಡ್ಕಂಡು ಯಾವ್ದಾರೂ ರಾಹು ಕೇತು ವಕ್ಕರಿಸಿಕೊಂಡವ್ರಾ? ಉಪ ಚುನಾವಣೇ ಬೇರೆ ಬಂತು. ಕೇಳ್ಕಂಬತ್ತೀನಿ ಅಂತ ದೇವರ ನಾಡು(God's Own country) ಕಡೆ ಹೋಗವ್ರಂತೆ. ವಾಪಸ್ ಬರಾದು ಮುಂದಿನ್ ಅಮಾಸೆ ಕಳೆದ ಮ್ಯಾಕಂತೆ.!"
"ಹೌದಾ? ನಮ್ ಸುಬ್ರಹ್ಮಣ್ಯಸ್ವಾಮಿಗಳಾದ್ರೂ ಸಿಕ್ಕಿದ್ರಾ?"
ಕಿ.ಕ್ಯಾ.:"ಸಿಕ್ಕಿದ್ರು. ಆದ್ರೆ ಅವರೂ ಡಲ್ಲಾಗಿದ್ರು. ಮಾತಾಡ ಮೂಡ್ನಾಗೆ ಇರ್ನಿಲ್ಲ.!"
"ಅದ್ಯಾಕ್ಲಾ? ಮೊನ್ನೆ ಗಂಟ ಗುಂಡ್ಕಲ್ ಇದ್ದಂಗೆ ಇದ್ರಲ್ಲ! ಈಗೇನಾತ್ಲಾ?"
" ಯಾವ್ದೊ ಭಾಸಣದಾಗೆ 'ನಾನು ಇನ್ಮುಂದೆ ಪಂಚೆ ಉಟ್ಕಂಡೇ ಓಡಾಡ್ತೀನಿ' ಅಂತ ಹೇಳಿದ್ದಕ್ಕೆ ಯಾರೋ ಕರೆಂಟ್ ಕೊಟ್ಟಂಗೆ ಕಮೆಂಟ್ ಮಾಡವ್ರಂತಲ್ಲಾ!?"
"ಯಾರ್ಲಾ ಅದು ಅಂಥಾ ಗಂಡು!?"
"ಅವರಾ ಹೆಸ್ರು "ಪುಟ್ಟ"ದಾಗಿದ್ರೂ ಕ್ಯಾರೆಕ್ಟರು ಫವರ್ಫುಲ್ ಆಗಿರೋ "ಅಣ್ಣಯ್ಯ" ಒಬ್ರು ಅವ್ರಂತಲ್ಲ! ಅವರೇ ಈ ಕ(ರೆ)ಮೆಂಟ್ ಕೊಟ್ಟೋರು. ಅವರು 'ಸ್ವಾಮಿಯವರು ನಿಜವಾದ ಮಣ್ಣಿನ ಮೊಮ್ಮಗನೇ ಆಗಿದ್ರೆ ಚಡ್ಡಿ ಹಾಕ್ಕಂಡು ತಿರುಗಾಡ್ಲಿ. ನಾನು ಒಪ್ಕತೀನಿ......' ಅಂತೆಲ್ಲಾ ಹೇಳಿದ್ರಂತೆ. ಅದ್ಕೆ ಇವ್ರು ವರ್ಸಾನುದಿನ ತೊಳೆಯದ ಪಂಚೆ ಥರ ಮುಖ ಮಾಡ್ಕಂಡು ಕುಂತ್ಕಂಡಿದ್ರು!"
"ಹೋಗ್ಲಿ. ನಮ್ಮ ಚಿಕ್ಕತಮ್ಮಯ್ಯ ಆದ್ರೂ ಸಿಕ್ಕುದ್ರಾ?"
"ಇಲ್ಲ.! ಅಣ್ಣ ಸ್ವಾಮಿ ಆ ಪರಿ ಬೇಜಾರು ಮಾಡ್ಕಂಡಿರಾದು ನೋಡಿ 'ಹೋಗ್ಲಿ ಅತ್ಲಾಗೆ ಒಂದು ಪಟ್ಟಾಪಟ್ಟಿ ಚಡ್ಡೀನಾರ ತಂದುಕೊಡಾವ ಅಂತ ಜವಳಿ ಸಾಪ್ ಕಡೆ ಹೋಗಿದ್ರಂತೆ.! ಅಣ್ಣದೇವರ ಸೈಜಿನ್ ಚಡ್ಡಿ ಎಲ್ಲೂ ಸಿಗಾಕಿಲ್ಲ ಅಂತಂದಾಗ ಯಾವದಾರ ಸಾಮಿಯಾನ ಕಂಪ್ನಿಗೆ ಹೋಗಿ ಒಂದಷ್ಟು ಬಟ್ಟೆ ತತ್ತೀನಿ. ಫ್ರೀ ಸೈಜಿಂದು ಹೊಲಿಸಿದ್ರಾತು ಅಂತ ಸಾಮಿಯಾನ ಫ್ಯಾಕ್ಟರಿ ಹುಡಿಕ್ಕಂಡು ಹೋಗವ್ರಂತೆ!"
"ಅಯ್ಯೋ ಪಾಪ..! ಇತ್ತಾಗೆ ನಮ್ಮ ಹೈಕೋರ್ಟ್ ಎದುರಿಂದ ಏನಾರ ಸುದ್ದಿ ಐತಾ?"
"ಇಸೇಸ ಸುದ್ದಿ ಏನಿಲ್ಲ. ಈ ತಿಂಗ್ಳ 13ಕ್ಕೆ ನಮ್ ಕಲಾಂ ಸಾರು ಏನೋ 'ಕ್ಲಾಸ್ ತಗತ್ತೀನಿ ರೆಡಿಯಾಗಿರಿ" ಅಂದವ್ರಂತಲ್ಲ. ಅದ್ಕೆ ತಯಾರಾಗೋದ್ರಾಗೆ ಬಿಜಿಯಾಗವ್ರೆ ಎಲ್ಲ.!"
"ಬೆಂದಕಾಳೂರಿಂದು ಈ ಕಥೆನಾ?" ಇನ್ನು ನಮ್ ಮಹಿಷಪುರ ಕತೆ ಏನಪ?"
"ಅಯ್ಯೋ ಇಲ್ಲಿದೇನು ಬುಡಿ ಸಿವಾ! ಉಸ್ತುವಾರಿ ನೋಡೋ 'ಅಕ್ಕೋರು' ದಸರಾನ 'ಶೋಭಾ'ಯಮಾನವಾಗಿ ಮಾಡಿ ಮುಗ್ಸುದ್ದು ನೋಡಿ 'ಅಪ್ಪೋರು' ದಿಲ್ ಕುಸ್ ಆಗವ್ರಂತೆ. ಅದ್ನ ಕಂಡು ಖುಸಿಯಾದ ಅಕ್ಕೋರು 'ಮುಂದಿನ ದಸರಾಗೆ ಈಗ್ಲಿಂದೆ ತಯಾರಿ ಸುರುಹಚ್ಕಳಿ' ಅಂತ ಅಧಿಕಾರಿಗುಳೀಗೆ ಏಳಿ ತಮ್ಮ ಗೂಟದ ಕಾರು ಹತ್ತಿ ಹೋದವ್ರು ಇನ್ನೂ ಇತ್ತಾ ಕಡೆ ಮುಖ ಮಾಡಿಲ್ವಂತೆ. ಇತ್ತಾಗೆ ರಂಗಾಯಣದಾಗೆ ಬಹುರೂಪಿ ನಾಟಕೋತ್ಸವ ಬಂತಲ್ಲ, ಅದ್ಕೆ ನಮ್ಮ ಖ್ಯಾ(ತೆ)ತ ಇಮರ್ಸಕರೆಲ್ಲ ಹೊಸ ಪೆನ್ನು ತಗಂಡು, ಜುಬ್ಬ ಪೈಜಾಮ ತೊಳ್ಕೊಂಡು, ಫ್ರೆಂಚ್ ಗಡ್ಡ ಟ್ರಿಮ್ ಮಾಡ್ಕಂಡು ತಯಾರಾಗ್ತವ್ರೆ! ಈ ಸರ್ತಿ 'ಬಹುರೂಪಿ'ಲಿ ಏನ್ ಕುರೂಪ ಹುಡುಕ್ಲಿ ಅಂತ ಕನ್ನಡ್ಕ ಒರೆಸ್ಕೊಂಡು ಕುಂತವ್ರೆ!"
"ಹೌದಾ. ಸರಿಕಣ್ ಬುಡು. ಬಹುರೂಪಿ ಟೇಮಿನಾಗೆ ಇತ್ಲಾಗೆ ಚೂರು ಗ್ಯಾನ ಮಡುಗು. ಬರೀ ಬೆಂದಕಾಳೂರ್ನಾಗೇ ಕಾಲ ಕಳಿತ ಕೂರ್ಬೇಡ" ಎಂದ ಕೊತ್ವಾಲ ಹೊರಡಲನುವಾದ.
ಅದನ್ನು ಕಂಡ ಕಿ.ಕ್ಯಾ. ಮಾಮೂಲಿಗಾಗಿ ಕೈಯೊಡ್ಡಿ ಹಲ್ಲುಗಿಂಜಿದ. "ಥೂ ಬಡ್ಡೇತದೆ. ಈ ಚಿಲ್ರೆ ಬುದ್ಧಿ ಬುಡಾಕಿಲ್ವಲ ನೀನು" ಎಂದು ಹತ್ತು ರೂನ ನೋಟನ್ನು ನೀಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾದ.
ಬುಧವಾರ ೩ ಡಿಸೆಂಬರ್ ೨೦೦೮
ಬ್ಲಾಗಿಗ 'ಹಳಿ' ತಪ್ಪಿದ ಕಥೆ
ಮರುದಿನ ಬೆಳಿಗ್ಗೆ 7.30ರ ರೈಲಿಗೆ ಹೊರಟಿದ್ದೇನೆಂದು ಆತ ಮೆಸೇಜ್ ಕಳುಹಿಸಿದ. ಹನ್ನೊಂದು ಗಂಟೆ ಸುಮಾರಿಗೆ ಬರಬಹುದೆಂದು ಆತನಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲೇ 'ಮೈಸೂರಿಗೆ ಬರುವಾಗ 'ಬಂಗಾರಪೇಟೆ' ಅಂತ ಊರು ಸಿಗುತ್ತಾ?' ಎಂಬ ಪ್ರಶ್ನೆ ಹೊತ್ತ ಆತನ ಎಸ್ಸೆಮ್ಮೆಸ್ ಬಂತು. ಮಹಾಶಯ ಹಳಿತಪ್ಪಿದ್ದಾನೆಂದು ತಕ್ಷಣ ಅರಿವಾಯಿತು. ರೈಲುಗಳ ಸಮಯವನ್ನು ಸರಿಯಾಗಿ ಕಳಿಸಿದ್ದರೂ ಟಿಕೆಟ್ ನೀಡುವಾತ ಹೇಳಿದ ಪ್ಲಾಟ್ ಫಾಮ್ ಸಂಖ್ಯೆಯನ್ನೇ ನೆಚ್ಚಿಕೊಂಡು ರೈಲಿನ ಬೋಡ್ ಕೂಡ ನೋಡದೆ ಹತ್ತಿ ಕುಳಿತಿದ್ದ ಪುಣ್ಯಾತ್ಮ!
ಒಂದೆಡೆ ಸೀಟು ಸಿಗುತ್ತಿದ್ದಂತೆ ಭೈರಪ್ಪನವರ 'ಅನ್ವೇಷಣ'ದಲ್ಲಿ ಮುಳುಗಿದ್ದವನಿಗೆ ಗಂಟೆ ಹನ್ನೊಂದಾದರೂ ರೈಲು ಮೈಸೂರು ತಲುಪದಿದ್ದಾಗ ತಟ್ಟನೆ ಜ್ಞಾನೋದಯ(!) ವಾಗಿ 'ರೈಲು ಎಲ್ಲೆಲ್ಲೋ ಹೋಗ್ತಿದೆ ಮಾರಾಯ!' ಎಂದು ಗೊಣಗಿಕೊಂಡು ಮತ್ತೊಂದು ಮೆಸೇಜ್ ಬಿಟ್ಟ. ಎಲ್ಲೋ ಎಸೆದಿದ್ದ ರೈಲು ವೇಳಾಪಟ್ಟಿಯನ್ನು ಪುನಃ ಹುಡುಕಿ ಮೆಸೇಜ್ ಕಳೀಸಬೇಕಾದ ಕಮ ನನ್ನದಾಯಿತು. ಅದೇ ಸಮಯಕ್ಕೆ ಅವನ ಮೊಬೈಲ್ ಕರೆನ್ಸಿಯೂ ಖಾಲಿಯಾಗಿದ್ದರಿಂದ ಅದರ ರಿಚಾಜ್ ಹೊಣೆಯೂ ನನ್ನ ಹೆಗಲಿಗೇ ಬಿತ್ತು!
ಆತ ಬಂಗಾರಪೇಟೆಯಿಂದ ಬೆಂಗಳೂರಿಗೆ ಮರಳಿ ಬಂದು ಮೈಸೂರಿನ ರೈಲು ಹತ್ತುವವರೆಗೂ ಜೀವ ಎಡಗೈಲಿ ಹಿಡಿದುಕೊಂಡಂತಾಗಿತ್ತು ನನ್ನ ಸ್ಥಿತಿ. ಪ್ರಯಾಣದುದ್ದಕ್ಕೂ ಭೂಪ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದರೆ, ಪುಕ್ಕಟೆ ಪರೋಪಕಾರಿಯಾಗಲು ಹೊರಟ ನಾನು ಆತ ಮತ್ತೆಲ್ಲೋ ಕಾಣೆಯಾದರೆ ಗತಿಯೇನೆಂಬ ಆತಂಕದಲ್ಲಿದ್ದೆ. (ಅವ ಅಪ್ಪ-ಅಮ್ಮರಿಗೆ ಒಬ್ಬನೇ ಮಗ ಬೇರೆ!)
ಇಷ್ಟೆಲ್ಲ ಆಗುವಷ್ಟರಲ್ಲಿ ಈತ ಹಳಿ ತಪ್ಪಿದ ಸುದ್ದಿ ಅವನ ಸಹೋದ್ಯೋಗಿಯೊಬ್ಬರಿಗೆ ಗೊತ್ತಾಗಿ ವೃತ್ತಿಬಾಂಧವರ ನಡುವೆಯೆಲ್ಲಾ ಅದು ಪ್ರಚಾರವಾಗಿಬಿಟ್ಟಿತ್ತು. ಅವರೆಲ್ಲ ಫೋನಿನಲ್ಲೇ ಇವನನ್ನು ಒಂದು ಸುತ್ತು ಕಿಚಾಯಿಸಿ ಮಜ ತೆಗೆದುಕೊಂಡಿದ್ದರು. ರೈಲನ್ನೂ , ವೃತ್ತಿಬಾಂಧವರನ್ನೂ ದೂವಾಸ ಮುನಿಯಂತೆ ಶಪಿಸುತ್ತ ಸಂಜೆ ವೇಳೆಗೆ ಮಿತ್ರ ಮೈಸೂರು ತಲುಪಿದ. ಈ ನಡುವೆ ಆ ಮಹಾಶಯನನ್ನು ಹಳಿ ಹತ್ತಿಸುವಷ್ಟರಲ್ಲಿ ನಾನು ಹೈರಾಣಾದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ!
